ಸಂಪಾದಕೀಯ | ಇ- ಆಡಳಿತದ ಹೆಮ್ಮೆ; ನೋಂದಣಿಗೆ ಶೀಘ್ರ ಕಾವೇರಿ ತಂತ್ರಾಂಶ 2.0

E Service
Published on

ಕಾವೇರಿ ತಂತ್ರಾಂಶ 2.0 ಅನ್ನು ಇನ್ನು ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಂದಾಯ ಇಲಾಖೆಯು ಅಳವಡಿಸುತ್ತಿದೆ. ನೂತನ ತಂತ್ರಾಂಶದಿಂದ ಕೇವಲ 7 ರಿಂದ 10 ನಿಮಿಷದಲ್ಲಿ ಆಸ್ತಿ ನೋಂದಣಿ ಮುಗಿಯುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಘೋಷಿರುವುದು ವಾಸ್ತವದಲ್ಲಿ ಜಾರಿಗೆ ಬರುವ ಸಾಧ್ಯತೆ ಇದ್ದು, ತಂತ್ರಜ್ಞಾನ ಬಳಕೆ ಮೂಲಕ ನೋಂದಣಿ ಪ್ರಕ್ರಿಯೆಯಲ್ಲಿ ಇನ್ನಷ್ಟು ತ್ವರಿತಗತಿ ಹಾಗೂ ಪಾರದರ್ಶಕತೆ ಮೂಲಕ ವಿಶ್ವಾಸಾರ್ಹತೆ ವೃದ್ಧಿಯಾಗುವ ನಿರೀಕ್ಷೆ ಮೂಡಿದೆ.

ನೂತನ ಕಾವೇರಿ 2.0 ತಂತ್ರಾಂಶವು ಜನಸ್ನೇಹಿ ಅಂಶಗಳನ್ನು ಒಳಗೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದ್ದು, ಇ-ಆಡಳಿತದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ. ಕರ್ನಾಟಕದಲ್ಲಿ ಭೂದಾಖಲೆಗಳ ಕಂಪ್ಯೂಟರೀಕರಣವು 1991ರಲ್ಲಿ ಆರಂಭಗೊಂಡಿತು. 2000ನೇ ಇಸ್ವಿಯಲ್ಲಿ ಭೂಮಿ ಇ-ಆಡಳಿತ ಯೋಜನೆ ಮೂಲಕ ರಾಜ್ಯದ 177 ತಾಲೂಕುಗಳ 2 ಕೋಟಿಗೂ ಅಧಿಕ ಆಸ್ತಿಗಳ ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಲಾಯಿತು. ಕಂಪ್ಯೂಟರ್ ಮೂಲಕ ಕೆಲ ಕ್ಷಣಗಳಲ್ಲಿ ಪಹಣಿ ಪತ್ರಿಕೆ, ಮ್ಯುಟೇಶನ್, ಟಿಪ್ಪನ್ ಎಕ್ಸ್​ಟ್ರಾ್ಯಕ್ಟ್, ಆರ್​ಆರ್5, ಮ್ಯುಟೇಶನ್ ಸ್ಟೇಟಸ್ ಮುಂತಾದ ಭೂದಾಖಲೆಗಳು ಲಭಿಸುವಂತಾಯಿತು. 2002ರಲ್ಲಿ ನೋಂದಣಿ ಕಚೇರಿಗಳಲ್ಲಿ ನೋಂದಣಿ ಕಾರ್ಯಕ್ಕಾಗಿ ಕಾವೇರಿ ತಂತ್ರಜ್ಞಾನ ಅಳವಡಿಸಲಾಯಿತು. ನೋಂದಣಿದಾರರ ಫೋಟೋ, ಬೆರಳಚ್ಚು ಪಡೆದುಕೊಳ್ಳುವ ಹಾಗೂ ದಾಖಲೆಗಳ ಕಂಪ್ಯೂಟರೀಕರಣ ಮಾಡುವ ಮೂಲಕ ಸಾಕಷ್ಟು ಸುಧಾರಣೆ ಸಾಧಿಸಲಾಯಿತು. ಈ ಸಾಫ್ಟ್​ವೇರ್ ತಂತ್ರಜ್ಞಾನ ಬಳಕೆಯೊಂದಿಗೆ ಭೂ ವ್ಯವಹಾರಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಲಾಯಿತು.

ಈಗ ಸುಧಾರಣೆಗಳೊಂದಿಗೆ ಕಾವೇರಿ 2.0 ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ಆಸ್ತಿ ನೋಂದಣಿ ಮಾಡುವ ಮೊದಲು ಆನ್​ಲೈನ್ ಮೂಲಕ ಉಪನೋಂದಣಾಧಿಕಾರಿ ಕಚೇರಿಗೆ ಖರೀದಿ ಒಪ್ಪಂದ ಪತ್ರವನ್ನು ಕಳುಹಿಸಬಹುದಾಗಿದ್ದು, ಅದರಲ್ಲೇನಾದರೂ ತಪ್ಪಿದ್ದರೆ ಉಪ ನೋಂದಣಾಧಿಕಾರಿ ತಿದ್ದಿ ಕಳುಹಿಸುತ್ತಾರೆ. ನಂತರ ನಿಗದಿತ ಹಣ ಕಟ್ಟಲು ಸೂಚನೆ ನೀಡುತ್ತಾರೆ.

ಎಲ್ಲವೂ ಸರಿಯಾದ ಬಳಿಕ ಸ್ಲಾಟ್ ಬುಕ್ ಮಾಡಲಾಗುತ್ತದೆ. ಆ ವೇಳೆಗೆ ಹೋಗಿ ಫೋಟೋ, ಸಹಿ, ಹೆಬ್ಬೆಟ್ಟು ಹಾಕಿ ನೋಂದಣಿ ಮಾಡಿಸಿಕೊಳ್ಳಬಹುದು. ನಂತರ ಆನ್​ಲೈನಲ್ಲೇ ಇ.ಸಿ ಮತ್ತು ಪ್ರಮಾಣಪತ್ರ ಪಡೆಯಬಹುದಾಗಿದೆ. ಇದರಿಂದ ನೋಂದಣಿಗಾಗಿ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾಯುವುದು, ಪಾಳಿಯಲ್ಲಿ ನಿಲ್ಲುವ ಸಮಸ್ಯೆ ತಪ್ಪಲಿದೆ. ಸರ್ವರ್ ಡೌನ್ ಕಾಟ ಕಣ್ಮರೆಯಾಗಬಹುದಾಗಿದೆ. ನೋಂದಣಿ ಶುಲ್ಕವನ್ನು ಬ್ಯಾಂಕ್ ಅಕೌಂಟ್​ನಿಂದ ನೇರವಾಗಿ ಇಲಾಖೆ ಖಾತೆಗೆ ವರ್ಗಾವಣೆ ಮಾಡಬಹುದಾಗಿದೆ. ನೋಂದಣಿ ಆದ ಬಳಿಕ ದಾಖಲೆಗಳು ಮಾಲೀಕರ ಡಿಜಿ ಲಾಕರ್​ಗೆ ಹೋಗಲಿದೆ. ಇದರಿಂದಾಗಿ ಮನೆಯಲ್ಲೇ ಕುಳಿತು ದಾಖಲೆ ಪಡೆಯಬಹುದು. ಅಲ್ಲದೆ, ಭೂ ವಂಚನೆಗಳನ್ನು ತಪ್ಪಿಸುವ ರೀತಿಯಲ್ಲಿಯೂ ಈ ಸಾಫ್ಟವೇರ್ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಹಾಗೂ ಬೆಳಗಾವಿ ದಕ್ಷಿಣ ಉಪನೋಂದಣಿ ಕಚೇರಿಗಳಲ್ಲಿ ಅಳವಡಿಸಲಾಗಿದೆ.

ಆಸ್ತಿ, ವಿವಾಹ ಸೇರಿದಂತೆ ಕಂದಾಯ ಇಲಾಖೆಗೆ ಸೇರಿದ ಎಲ್ಲ ರೀತಿಯ ನೋಂದಣಿಗಳನ್ನು ಆನ್​ಲೈನ್​ನಲ್ಲೇ ಮಾಡಲು ಉದ್ದೇಶಿಸಿರುವುದು ಇ-ಆಡಳಿತದಲ್ಲಿ ಈಗಾಗಲೇ ದೇಶದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಮತ್ತಷ್ಟು ಗರಿ ಮೂಡಿಸುವ ಸಂಗತಿ. ಈ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸುವುದು ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net