

ಲಂಡನ್/ಬೀಜಿಂಗ್: ಚೀನಾದಲ್ಲಿ ಉಲ್ಬಣಿಸಿರುವ ಕೋವಿಡ್ ಮಹಾಮಾರಿಗೆ ಈಗ ದೈನಿಕ 9,000ದಷ್ಟು ಜನರು ಬಲಿಯಾಗುತ್ತಿದ್ದಾರೆ ಎಂದು ಬ್ರಿಟನ್ನ ಆರೋಗ್ಯ ಸಂಸ್ಥೆಯೊಂದು ಅಂದಾಜು ಮಾಡಿದೆ. ಈ ನಡುವೆ, ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಚೀನಾದಿಂದ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ವಿಧಿಸುವ ದೇಶಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಝೀರೋ-ಕೋವಿಡ್ ನೀತಿಯನ್ನು ಡಿಸೆಂಬರ್ನಲ್ಲಿ ಕೈಬಿಟ್ಟ ನಂತರ ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಏರುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಆದರೆ ಚೀನಾ ಸರ್ಕಾರ ಮಾತ್ರ ಸೋಂಕಿತರು ಹಾಗೂ ಮೃತರ ಸಂಖ್ಯೆಯನ್ನು ಪಾರದರ್ಶಕವಾಗಿ ಬಹಿರಂಗಪಡಿಸುತ್ತಿಲ್ಲ ಎಂಬ ಆರೋಪ ಬಲವಾಗಿದೆ. ಡಿಸೆಂಬರ್ ಕೊನೆ ಹೊತ್ತಿಗೆ ಕರೊನಾದಿಂದ ಚೀನಾದಲ್ಲಿ ಮರಣಿಸಿದವರ ಸಂಖ್ಯೆ ಒಂದು ಲಕ್ಷ ದಾಟಿರಬಹುದು ಹಾಗೂ ಒಟ್ಟು 18.6 ಮಿಲಿಯ ಮಂದಿ ಪಾಸಿಟಿವ್ ಆಗಿರಬಹುದು ಎಂದು ಬ್ರಿಟನ್ ಸಂಸ್ಥೆ ಅಂದಾಜು ಮಾಡಿದೆ.
ಒಂದು ಅಂದಾಜಿನ ಸಾವಿನ ಸಂಖ್ಯೆಗೂ ಚೀನಾ ಸರ್ಕಾರ ನೀಡುವ ಲೆಕ್ಕಕ್ಕೂ ಭಾರಿ ವ್ಯತ್ಯಾಸವಿದೆ. ಕರೊನಾ ವೈರಸ್ ಸೋಂಕಿದ ನಂತರ ಉಸಿರಾಟದ ತೊಂದರೆಯಿಂದ ಮೃತಪಡುವುದನ್ನು ಮಾತ್ರ ಕೋವಿಡ್ ಸಾವು ಎಂದು ಚೀನಾ ಪರಿಗಣಿಸುವುದೇ ಇದಕ್ಕೆ ಕಾರಣವಾಗಿದೆ. ಆದರೆ, ಬೇರೆ ದೇಶಗಳು, ಜನರು ಪಾಸಿಟಿವ್ ಆದ 28 ದಿನದೊಳಗೆ ಸಂಭವಿಸುವ ಸಾವುಗಳನ್ನು ಕರೊನಾ ಸಾವು ಎಂದು ಪರಿಗಣಿಸುತ್ತವೆ. ಡಿಸೆಂಬರ್ 30ರಂದು ಕೇವಲ ಒಬ್ಬರು ಕೋವಿಡ್ನಿಂದ ಸತ್ತಿದ್ದಾರೆಂದು ಚೀನಾ ವರದಿ ಮಾಡಿದೆ. ಚೀನಾದಿಂದ ಆಗಮಿಸುವ ಪ್ರಯಾಣಿಕರು ನೆಗೆಟಿವ್ ಟೆಸ್ಟ್ ವರದಿ ಸಲ್ಲಿಸಬೇಕು ಅಥವಾ ಪರೀಕ್ಷೆಗೆ ಒಳಪಡಬೇಕು ಎಂಬಿತ್ಯಾದಿ ನಿರ್ಬಂಧಗಳನ್ನು ಹೇರುತ್ತಿರುವ ರಾಷ್ಟ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಈ ಪಟ್ಟಿಯಲ್ಲಿ ಡಜನ್ಗೂ ಅಧಿಕ ದೇಶಗಳು ಸೇರಿವೆ. ಆಸ್ಟ್ರೇಲಿಯಾ, ನೆಗೆಟಿವ್ ವರದಿ ಕಡ್ಡಾಯಗೊಳಿಸಿದ ಇತ್ತೀಚಿನ ದೇಶವಾಗಿ ಹೊರಹೊಮ್ಮಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಈಗಾಗಲೇ ನಿರ್ಬಂಧ ಜಾರಿಗೊಳಿಸಿವೆ.
ಚೀನಾ ಸಮರ್ಥನೆ
ಕೋವಿಡ್ ಪಾಸಿಟಿವ್ ಕೇಸ್ ಸಂಖ್ಯೆ ಹಾಗೂ ಸಾವಿನ ಬಗ್ಗೆ ತಾನು ನೀಡುತ್ತಿರುವ ಮಾಹಿತಿ ಪಾರದರ್ಶಕವಾಗಿರುವುದಾಗಿ ಚೀನಾದ ಆರೋಗ್ಯ ಇಲಾಖೆ ಪ್ರತಿಪಾದಿಸಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ‘ಮುಕ್ತತೆ ಹಾಗೂ ಪಾರದರ್ಶಕತೆ ಸಿದ್ಧಾಂತಕ್ಕೆ ಅನುಗುಣವಾಗಿ ಮಾಹಿತಿ ನೀಡಲಾಗುತ್ತಿದೆ’ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ನ ಮೆಡಿಕಲ್ ಆಡಳಿತ ಬ್ಯೂರೋ ಮುಖ್ಯಸ್ಥ ಜಿಯಾವೋ ಯಾಹುಯ್ ಹೇಳಿದ್ದಾರೆ.
265 ಹೊಸ ಕೇಸ್
ಭಾರತದಲ್ಲಿ ಭಾನುವಾರ ಬೆಳಿಗ್ಗೆ ವರೆಗಿನ ಒಂದು ದಿನದ ಅವಧಿಯಲ್ಲಿ 265 ಜನರು ಹೊಸದಾಗಿ ಸೋಂಕಿತರಾಗಿದ್ದಾರೆ. ಕೇರಳ ಮತ್ತು ಕರ್ನಾಟಕ ಹಿಂದಿನ ತಲಾ ಒಂದು ಸಾವಿನ ಪ್ರಕರಣಗಳನ್ನು ಭಾನುವಾರ ವರದಿ ಮಾಡಿರುವುದರಿಂದ ದೇಶದಲ್ಲಿ ಮೃತರ ಒಟ್ಟು ಸಂಖ್ಯೆ 5,30,705 ಆಗಿದೆ.