

ನವದೆಹಲಿ: ಮುಂದಿನ ಐದು ವರ್ಷಗಳು ಮಾರ್ಗಸೂಚಿ ಎಂದೇ ಬಿಂಬಿತವಾಗಿರುವ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಜೆಟ್ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದರು.
ಭೇಟಿಯ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ ಮೊಸರು ಶುಭ ಕೋರಿದರು. ಈ ವೇಳೆ ವೇಳೆ ಹಣಕಾಸು ಸಚಿವಾಲಯದ ಹಲವಾರು ಹಿರಿಯ ಅಧಿಕಾರಿಗಳು ರಾಷ್ಟ್ರಪತಿ ಭವನದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಪತಿಗಳ ಒಪ್ಪಿಗೆ ಬಳಿಕ ಸಂಸತ್ತಿನ ಕಡೆ ತೆರಳಲಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೂ ಮುನ್ನ ಸಂಪುಟ ಸಭೆಯಲ್ಲಿ ಬಜೆಟ್ಗೆ ಅನುಮೋದನೆ ಪಡೆಯಲಿದ್ದಾರೆ. ಇದಾದ ನಂತರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 11ನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 6ನೇ ಬಜೆಟ್ ಆಗಿದೆ. ಈ ಬಾರಿಯು ಸೂಟ್ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.