ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಬಿಸಿಸಿಐ ಈಗಾಗಲೇ ಮೆಗಾ ಹರಾಜಿಗೆ ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದೆ. 10 ಫ್ರಾಂಚೈಸಿಗಳ ಮಾಲೀಕರೊಂದಿಗೆ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ. ಬಿಸಿಸಿಐ ಶೀಘ್ರದಲ್ಲೇ ರಿಟೇನ್ ಪಾಲಿಸಿಯನ್ನು ಪ್ರಕಟಿಸಲಿದೆ.
ಮುಂದಿನ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ನಿಯಮಗಳ ಪ್ರಕಾರ, ಪ್ರತಿ ತಂಡವು 3 ರಿಂದ 5 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಆ ಮೂಲಕ ಎಲ್ಲ ತಂಡಗಳಲ್ಲೂ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ. ಈ ಕ್ರಮದಲ್ಲಿ ಐಪಿಎಲ್ ಅಗ್ರ ತಂಡ ಮುಂಬೈ ಇಂಡಿಯನ್ಸ್ನಲ್ಲಿ ಭಾರೀ ಬದಲಾವಣೆಗಳು ಆಗಲಿವೆಯಂತೆ.
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ ಮತ್ತು ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ತಂಡವನ್ನು ತೊರೆಯಲು ಸಿದ್ಧರಾಗಿರುವಂತೆ ತೋರುತ್ತಿದೆ. ಮುಂಬೈ ನಾಯಕತ್ವ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಈ ಇಬ್ಬರು ಆಟಗಾರರು ಬೇರೆ ಬೇರೆ ತಂಡಗಳಿಗೆ ಹೋಗಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮುಂಬೈ ಇಂಡಿಯನ್ಸ್ ತಂಡದ ಮೇಲೆ ಅಸಮಾಧಾನಗೊಂಡಿರುವ ರೋಹಿತ್ ಮತ್ತು ಸೂರ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳಿಗೆ ಹೋಗುತ್ತಾರೆ ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲಕಿ ಪ್ರೀತಿ ಜಿಂಟಾ ಸಂದರ್ಶನವೊಂದರಲ್ಲಿ ರೋಹಿತ್ ಅವರನ್ನು ಖರೀದಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದರು. ಇತ್ತ ಚೆನ್ನೈ ಕೂಡ ಹಿಟ್‌ಮ್ಯಾನ್ ಅನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂಬ ವರದಿಗಳಿವೆ.
ಅಂದಹಾಗೆ ರೋಹಿತ್ ಶರ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ ಐದು ಬಾರಿ ಗೆದ್ದಿದೆ. ಅವರು ಹತ್ತು ವರ್ಷಗಳ ಕಾಲ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದರು. ಹತ್ತು ವರ್ಷಗಳಲ್ಲಿ ಐದು ಪ್ರಶಸ್ತಿಗಳನ್ನು ಗೆಲ್ಲುವುದು ಸಾಧಾರಣ ಸಾಧನೆಯಲ್ಲ. ಆದರೆ, ರೋಹಿತ್ ವೃತ್ತಿಜೀವನ ಅಂತಿಮ ಹಂತದಲ್ಲಿರುವುದರಿಂದ ತಂಡದ ಭವಿಷ್ಯದ ಬಗ್ಗೆ ಯೋಚಿಸಿದ ಮುಂಬೈ ಮ್ಯಾನೇಜ್‌ಮೆಂಟ್, ಐಪಿಎಲ್ 2024ಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
ಮುಂಬೈ ಇಂಡಿಯನ್ಸ್ ತಂಡ ತೆಗೆದುಕೊಂಡ ಈ ನಿರ್ಧಾರ ಆಟಗಾರರು ಹಾಗೂ ಅಭಿಮಾನಿಗಳಿಗೆ ಅಷ್ಟಾಗಿ ಹಿಡಿಸಲಿಲ್ಲ. ಇದರಿಂದ ಮುಂಬೈ ತಂಡದಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಈ ಕಾರಣದಿಂದ ಮುಂಬೈ ತಂಡ ಕಳೆದ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ರೋಹಿತ್ ಮತ್ತು ಸೂರ್ಯಕುಮಾರ್ ತಂಡದಿಂದ ಹೊರ ಹೋದರೆ ಮುಂಬೈ ತಂಡಕ್ಕೆ ದೊಡ್ಡ ಹೊಡೆತ ಬೀಳುವುದರಲ್ಲಿ ಅನುಮಾನವೇ ಇಲ್ಲ. (ಏಜೆನ್ಸೀಸ್)
ಆ ಒಂದು ಕಾರಣಕ್ಕೆ ನಾನು ಸಿನಿಮಾಗಳಲ್ಲಿ ಅರ್ಧಂಬರ್ಧ ಬಟ್ಟೆ ತೊಡುವುದಿಲ್ಲ ಎಂದ ನಟಿ ಐಶ್ವರ್ಯಾ ರಾಜೇಶ್!
ಪ್ಲೀಸ್ ನನಗೊಂದು ಸಹಾಯ ಮಾಡಿ… ಅಭಿಮಾನಿಗಳ ಬಳಿ ರಿಷಭ್ ಪಂತ್ ವಿಶೇಷ ಮನವಿ!