ಚೆನ್ನೈ: ಐಶ್ವರ್ಯಾ ರಾಜೇಶ್ ತಮಿಳು ಸಿನಿಮಾ ರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೇವಲ ನಟಿ ಮಾತ್ರವಲ್ಲದೆ, ನೃತ್ಯಗಾರ್ತಿ ಮತ್ತು ಹೋಸ್ಟ್ ಕೂಡ ಹೌದು. ಅವರೋರುಮ್ ಇವರೋರುಮ್ ಸಿನಿಮಾ ಮೂಲಕ 2011ರಲ್ಲಿ ಕಾಲಿವುಡ್ ಪದಾರ್ಪಣೆ ಮಾಡಿದ ಐಶ್ವರ್ಯಾ, ತಮ್ಮ ಅಮೋಘ ಅಭಿನಯದ ಕಾರಣದಿಂದಾಗಿ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ತಮಿಳು ಮಾತ್ರವಲ್ಲದೆ, ತೆಲುಗಿನಲ್ಲೂ ಐಶ್ವರ್ಯಾ ಗುರುತಿಸಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪ್ರವೇಶ ಪಡೆಯುತ್ತಿದ್ದಾರೆ.
ಮೊದ ಮೊದಲು ಸಣ್ಣಪುಟ್ಟ ಪಾತ್ರಗಳೊಂದಿಗೆ ಹಂತ ಹಂತವಾಗಿ ಬೆಳೆದು, ಇಂದು ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಮಟ್ಟಕ್ಕೆ ಐಶ್ವರ್ಯಾ ಏರಿದರು. ಅಂದಹಾಗೆ ಐಶ್ವರ್ಯಾ ರಾಜೇಶ್ ಅವರು ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕಾಕ್ಕ ಮುತ್ತೈ ಚಿತ್ರದಲ್ಲಿ ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿ ಆ ಪಾತ್ರಕ್ಕೆ ಜೀವ ತುಂಬಿದ್ದರು. ಆ ಚಿತ್ರ ಐಶ್ವರ್ಯಾ ರಾಜೇಶ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಆದರೆ, ಸಿನಿಮಾ ಎಂದರೆ ಮೊದಲು ನೆನಪಿಗೆ ಬರುವುದು ಗ್ಲಾಮರ್ ಜಗತ್ತು ಮಾತ್ರ.
ಯಾವುದೇ ಚಿತ್ರದ ನಿರ್ಮಾಪಕರು ನಾಯಕಿಯರನ್ನು ಗ್ಲಾಮರಸ್ ಆಗಿ ತೋರಿಸಲು ಪ್ರಯತ್ನಿಸುತ್ತಾರೆ. ಅನೇಕ ನಾಯಕಿಯರು ಕೂಡ ತಮ್ಮ ಗ್ಲಾಮರ್ ನಂಬಿರುವುದಂತೂ ಸತ್ಯ. ಅನೇಕ ಸಂದರ್ಭಗಳಲ್ಲಿ ಸಿನಿಮಾಗಳಲ್ಲಿ ನಾಯಕಿಯರು ತುಂಬಾ ಹಾಟ್ ಆಗಿ ಕಾಣುವುದು ಸಾಮಾನ್ಯ. ಬಹುತೇಕ ಹೀರೋಯಿನ್ಗಳು ತಮ್ಮನ್ನು ತಾವು ಬ್ಯೂಟಿಫುಲ್ ಅಂದುಕೊಳ್ಳುತ್ತಾರೆ. ಆದರೆ, ಈ ವಿಚಾರದಲ್ಲಿ ಸಂಪೂರ್ಣ ಭಿನ್ನವಾಗಿರುವ ಕೆಲವೇ ಕೆಲವು ನಾಯಕಿಯರಲ್ಲಿ ನಟಿ ಐಶ್ವರ್ಯಾ ರಾಜೇಶ್ ಕೂಡ ಒಬ್ಬರು.
ತಮಿಳು ಚಿತ್ರರಂಗದಲ್ಲಿ ಐಶ್ವರ್ಯಾ ರಾಜೇಶ್‌ಗೆ ಬಹಳ ವಿಶಿಷ್ಟವಾದ ಇಮೇಜ್ ಇದೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿರುವ ಅವರು, ಈಗ ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸುತ್ತಿರುವುದರಿಂದ ತಮಿಳಿನಲ್ಲಿ ಚಿತ್ರಗಳು ಕಡಿಮೆಯಾಗಿವೆ. ಈ ನಡುವೆ ಇತ್ತೀಚೆಗಷ್ಟೇ ವಿದೇಶಕ್ಕೆ ತೆರಳಿದ್ದ ಐಶ್ವರ್ಯಾ, ತಮ್ಮ ಗ್ಲಾಮರಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಐಶ್ವರ್ಯ ಕೂಡ ಗ್ಲಾಮರ್‌ಗೆ ಬದಲಾಗಿದ್ದಾರೆ ಎಂಬ ಪ್ರಚಾರ ಈ ವೇಳೆ ನಡೆದಿತ್ತು.
ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಐಶ್ವರ್ಯಾ, ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲು ತನಗೆ ಸಾಕಷ್ಟು ಅವಕಾಶಗಳು ಬಂದಿವೆ. ಆದರೆ, ನಾನು ಗ್ಲಾಮರ್ ಪಾತ್ರಗಳಲ್ಲಿ ನಟಿಸುವುದಿಲ್ಲ. ನನಗೆ ಚೆನ್ನಾಗಿ ಕಾಣುವುದಿಲ್ಲ. ನಾನು ನನಗೆ ಸೂಕ್ತವಾದ ಪಾತ್ರಗಳಲ್ಲಿ ಮಾತ್ರ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಗ್ಲಾಮರಸ್ ಆಗಿ ನಟಿಸುವುದು ನನಗೆ ಇಷ್ಟವಿಲ್ಲ. ಹಾಗಾಗಿಯೇ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲು ಒಲವು ತೋರುತ್ತಿಲ್ಲ ಎಂದು ಐಶ್ವರ್ಯಾ ರಾಜೇಶ್ ತಿಳಿಸಿದ್ದಾರೆ. (ಏಜೆನ್ಸೀಸ್)
ಪ್ರತಿ ಶನಿವಾರದಂದೇ 7 ಬಾರಿ ಯುವಕನಿಗೆ ಹಾವು ಕಚ್ಚಿದ್ದೇಕೆ? ಕೊನೆಗೂ ಬಯಲಾಯ್ತು ಸ್ಫೋಟಕ ಸತ್ಯ
ಆ ಒಂದು ರಿಸ್ಕ್ ತೆಗೆದುಕೊಳ್ಳಲು ಗೌತಿಗೆ ಹೆದರಿಕೆ! ಬಿಸಿಸಿಐ ಬೆಂಬಲವಿದ್ರು ಗಂಭೀರ್ಗೆ ಕಾಡುತ್ತಿರುವ ಭಯವೇನು?