ಸೈಬರ್ ಕಳ್ಳರ ಗಾಳ, ಭಕ್ತಿಯೇ ಬಂಡವಾಳ: ದಂಧೆಗಾಗಿ ತೆರೆದಿವೆ ಕಾಲ್​ಸೆಂಟರ್, ಫೋನ್​ನಲ್ಲೇ ಭಾವನಾತ್ಮಕ ಅಸ್ತ್ರ, ನಂಬಿದ್ರೆ ಟೋಪಿ ಖಚಿತ..

cyber
Published on

ಬೆಂಗಳೂರು: ದೇವರು, ಭವಿಷ್ಯ, ವಾಸ್ತು ಮೇಲೆ ನಿಮಗೆ ಅಪಾರ ನಂಬಿಕೆ ಇದೆಯೇ? ಹೌದು ಎಂದಾದಲ್ಲಿ ಕೊಂಚ ಎಚ್ಚರ ವಹಿಸಿ, ನಿಮ್ಮ ನಂಬಿಕೆ, ಭಕ್ತಿಯನ್ನೇ ಬಂಡವಾಳ ಮಾಡಿಕೊಳ್ಳುವ ಸೈಬರ್ ಕಳ್ಳರೀಗ ಗೊತ್ತಿಲ್ಲದಂತೆ ಬಲೆ ಬೀಸಿ ನಿಮ್ಮನ್ನು ವಂಚನೆಯ ಕೂಪಕ್ಕೆ ಬೀಳಿಸುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಕಾಲ್ ಸೆಂಟರ್​ನಿಂದಲೇ ಕರೆ: ಜನರನ್ನು ವಂಚನೆ ಜಾಲಕ್ಕೆ ಬೀಳಿಸಲು ಕಾಲ್ ಸೆಂಟರ್ ತೆರೆದು ಯುವತಿಯರನ್ನು ನೇಮಕ ಮಾಡಿಕೊಂಡಿರುವ ಅನುಮಾನವಿದೆ. ಕರೆ ಮಾಡುವ ಯುವತಿಯರು ಅಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಭೌಗೋಳಿಕ ಪ್ರದೇಶಗಳ ಪರಿಚಯವಿರುವುದಿಲ್ಲ. ಮಾತನಾಡುವ ವೇಳೆ ಅಕ್ಕಪಕ್ಕದಲ್ಲಿರುವವರು ಬೇರೆ ಗ್ರಾಹಕರಿಗೆ ಗಾಳ ಹಾಕುತ್ತಿರುವ ಧ್ವನಿಗಳು ಕೇಳುತ್ತಿರುತ್ತದೆ. ಈ ಎಲ್ಲದನ್ನೂ ಗಮನಿಸಿದರೆ ವಂಚನೆ ಹಿಂದೆ ದೊಡ್ಡ ಜಾಲವೇ ಸಕ್ರಿಯವಾಗಿರುವ ಅನುಮಾನ ಮೂಡುತ್ತದೆ.

ಹೊಸ ಮಾರ್ಗ: ಕಡಿಮೆ ಅವಧಿಯ, ಕಡಿಮೆ ದಾಖಲೆ ಪಡೆದು ಸಾಲ ಕೊಡುವ ಆಮಿಷವೊಡ್ಡಿ ಶುಲ್ಕ ರೂಪದಲ್ಲಿ ಹಣ ಪಡೆದು ವಂಚಿಸುವ ದಂಧೆ, ಚೀನಾ ಆಪ್​ಗಳಲ್ಲಿ ಸಾಲ ಕೊಡುವುದು, ನೌಕರಿ ಕೊಡಿಸುವ ನೆಪದಲ್ಲಿ, ಮೆಡಿಕಲ್ ಸೀಟ್ ಆಮಿಷವೊಡ್ಡಿ ವಂಚನೆ ಮಾಡುವ ಹಲವು ಜಾಲಗಳು ಸಕ್ರಿಯವಾಗಿವೆ. ಈ ಎಲ್ಲದಕ್ಕೂ ಕಿಂಗ್​ಪಿನ್​ಗಳು ಕನ್ನಡ ಬಲ್ಲ ಯುವತಿಯರನ್ನು ನೇಮಿಸಿಕೊಂಡು ಕಾಲ್ ಸೆಂಟರ್ ನಡೆಸುತ್ತಿರುವುದೂ ಬೆಳಕಿಗೆ ಬಂದಿದೆ. ಇದೀಗ ಜನರ ಧಾರ್ವಿುಕ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡುವ ಕುತಂತ್ರಕ್ಕೆ ಇಳಿದಿರುವುದು ಹೊಸ ಮಾದರಿಯ ಪ್ರಕರಣವಾಗಿದೆ.

ಹೇಗೆ ವಂಚಿಸ್ತಾರೆ?

ಸಾರ್ವಜನಿಕರ ಮೊಬೈಲ್​ಗೆ ಕರೆ ಮಾಡಿ ಸ್ವಾಮೀಜಿ, ಗುರೂಜಿಗಳ ಹೆಸರು ಹೇಳುವ ಸೈಬರ್ ಕಳ್ಳರು ನಿಮಗೆ ಅದೃಷ್ಟ ಒಲಿದಿದೆ ಎಂದು ನಂಬಿಸುತ್ತಾರೆ. ಗುರೂಜಿಗಳು ಒಂದು ಲಕ್ಷ ಮೊಬೈಲ್ ನಂಬರ್​ಗಳಲ್ಲಿ ಅದೃಷ್ಟ ಸಂಖ್ಯೆಯೊಂದನ್ನು ಆಯ್ಕೆ ಮಾಡಿದಾಗ ನಿಮ್ಮ ಫೋನ್ ನಂಬರ್ ಸಿಕ್ಕಿದೆ. ನಿಮಗೆ ಧನಲಕ್ಷ್ಮೀ, ಕುಬೇರ ಪಾದ, ವಾಸ್ತುಪುರುಷ ಮತ್ತು ಲಕ್ಷ್ಮೀ ಡಾಲರ್ ನೀಡಲಾಗುತ್ತದೆ. ನೀವು ಬಯಸಿದರೆ ನಿಮ್ಮ ಮನೆ ವಿಳಾಸಕ್ಕೆ ಪೋಸ್ಟ್ ಮಾಡಲಾಗುತ್ತದೆ. ಇಷ್ಟಕ್ಕೆಲ್ಲ ಕೇವಲ 1,500 ರೂ. ನೀಡಿದರೆ ಸಾಕು. ಈ ಎಲ್ಲವನ್ನು ಮನೆಯಲ್ಲಿಟ್ಟುಕೊಂಡರೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿದೆ ಎಂದು ಪುಸಲಾಯಿಸುತ್ತಾರೆ.

ನೀವು ಹಣ ಕೊಡಲು ಹಿಂದೇಟು ಹಾಕಿದರೆ ಗುರೂಜಿ ಕೊಡುವ ವಸ್ತು ನಿಮ್ಮ ಕೈಸೇರಿದ ಮೇಲೆಯೇ ಹಣ ಕೊಡುವಂತೆ ಮನವೊಲಿಸುತ್ತಾರೆ. ಕೆಲವೇ ಹೊತ್ತಿಗೆ ಗುರೂಜಿ ಹೆಸರಿನಲ್ಲಿ ಕರೆ ಮಾಡುವ ವ್ಯಕ್ತಿ, ಮನೆ ಮಾಲೀಕರ ಹೆಸರು, ವಿಳಾಸ ಮತ್ತು ಕುಟುಂಬ ಸದಸ್ಯರ ಹೆಸರು ಪಡೆಯುತ್ತಾರೆ. ನಿಮ್ಮ ವಿಳಾಸಕ್ಕೆ ಧನಲಕ್ಷ್ಮೀ, ಕುಬೇರ ಪಾದ, ವಾಸ್ತುಪುರುಷ ಮತ್ತು ಅದೃಷ್ಟ ಲಕ್ಷ್ಮೀ ಫೋಟೋ ಇನ್ನಿತರ ವಸ್ತುಗಳನ್ನು ಕಳುಹಿಸಿ 1,500 ರೂ. ಸಂಗ್ರಹಿಸುತ್ತಾರೆ. ಇದಾದ ಮೇಲೆ ನಿಮ್ಮ ದೂರವಾಣಿಯಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡೇ ನಿಮ್ಮ ಕುಟುಂಬದ ದೌರ್ಬಲ್ಯ ತಿಳಿದುಕೊಳ್ಳುತ್ತಾರೆ. ಆನಂತರ ಮನೆ ವಾಸ್ತು ಸರಿ ಇಲ್ಲ. ಸರಿಪಡಿಸಲು ಗುರೂಜಿ ಸಿದ್ಧಿಯಿಂದ ಗಳಿಸಿರುವ ಅದೃಷ್ಟ ವಸ್ತು ಪಡೆದುಕೊಳ್ಳಿ ಎಂದು ಸಲಹೆ ನೀಡುತ್ತಾರೆ. ತಪ್ಪಿದಲ್ಲಿ ನಿಮಗೆ ಕಂಟಕ ಕಾದಿದೆ. ಆ ಪೂಜೆ, ಈ ಪೂಜೆ ಮಾಡಿಸಬೇಕೆಂದು ಭಾವನಾತ್ಮಕವಾಗಿ ಹೆದರಿಸಿ ಬ್ಲಾ್ಯಕ್​ವೆುೕಲ್ ಮಾಡುತ್ತಾರೆ. ಇವರ ಹಿಂದೆ ಯಾರ್ಯಾರಿದ್ದಾರೆಂಬುದು ತನಿಖೆಯಿಂದ ಮಾತ್ರ ಗೊತ್ತಾಗಬೇಕಿದೆ.

ದೇಣಿಗೆ ಆಮಿಷ 8 ಲಕ್ಷ ರೂಪಾಯಿ ವಂಚನೆ

ಬೆಂಗಳೂರು: ಟ್ರಸ್ಟ್​ಗೆ ಲಕ್ಷಾಂತರ ರೂ. ದೇಣಿಗೆ ನೀಡುವ ಆಸೆ ಹುಟ್ಟಿಸಿದ ಸೈಬರ್ ಕಳ್ಳರು, 8 ಲಕ್ಷ ರೂ. ವಂಚಿಸಿದ್ದಾರೆ. ಬನಶಂಕರಿ ನಿವಾಸಿ ಸಂತೋಷ್ (48) ವಂಚನೆಗೆ ಒಶಗಾದವರು. ಸಂತೋಷ್ ‘ಹಿಸ್ ಗ್ರೇಸ್ ಟ್ರಸ್ಟ್’ ನಡೆಸುತ್ತಿದ್ದಾರೆ. ಸೆ.30ರಂದು ಪ್ರಜ್ಞಾನಂದ ಪಾಂಡೆ ಎಂಬ ಹೆಸರಲ್ಲಿ ಕರೆ ಮಾಡಿದ ವ್ಯಕ್ತಿ, ‘ನಿಮ್ಮ ಟ್ರಸ್ಟ್​ಗೆ ನಾವು ಲಕ್ಷಾಂತರ ರೂ. ದೇಣಿಗೆ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಅದಕ್ಕಾಗಿ ನಮ್ಮ ಕಂಪನಿಯ ಸಿಬ್ಬಂದಿ ಪ್ರವೀಣ್ ಕುಮಾರ್​ನನ್ನು ಸಂರ್ಪಸಿ’ ಎಂದು ಸೂಚಿಸಿದ್ದ. ಪ್ರವೀಣ್​ಗೆ ಸಂತೋಷ್ ಕರೆ ಮಾಡಿದಾಗ, ‘ನಮ್ಮ ಬ್ಯಾಂಕ್ ಖಾತೆಗೆ 12 ಲಕ್ಷ ರೂ. ಪ್ರೊಸೆಸಿಂಗ್ ಶುಲ್ಕ ಪಾವತಿಸಿದರೆ, ಹಣ ಜಮೆಯಾದ 24 ಗಂಟೆಯೊಳಗೆ ನಿಮ್ಮ ಟ್ರಸ್ಟ್​ಗೆ ದೇಣಿಗೆ ನೀಡಲಾಗುವುದು ಎಂದು ಹೇಳಿದ್ದ.

ಆಮಿಷಕ್ಕೆ ಮರುಳಾದ ಸಂತೋಷ್, ವಂಚಕ ಕೊಟ್ಟ ಬ್ಯಾಂಕ್ ಖಾತೆಗೆ 12 ಲಕ್ಷ ರೂ. ಜಮೆ ಮಾಡಿದ್ದರು. ಹಣ ವರ್ಗಾವಣೆ ಮಾಡಿದ 24 ಗಂಟೆ ಕಳೆದರೂ ಪ್ರವೀಣ್​ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆತನಿಗೆ ಕರೆ ಮಾಡಿ ವಿಚಾರಿಸಿದ್ದರು. ಬಳಿಕ ಪ್ರವೀಣ್ ಹಂತಹಂತವಾಗಿ ಸಂತೋಷ್ ಬ್ಯಾಂಕ್ ಖಾತೆಗೆ 4 ಲಕ್ಷ ರೂ. ರೀಫಂಡ್ ಮಾಡಿದ್ದ. ಬಾಕಿ 8 ಲಕ್ಷ ರೂ. ಬಗ್ಗೆ ವಿಚಾರಿಸಲು ಪ್ರವೀಣ್​ಗೆ ಕರೆ ಮಾಡಿದಾಗ ಆತನ ಮೊಬೈಲ್ ಆಫ್ ಆಗಿತ್ತು. ಪ್ರಜ್ಞಾನಂದ ಪಾಂಡೆ ಸಹ ಸಂಪರ್ಕಕ್ಕೆ ಸಿಗಲಿಲ್ಲ. ಆಗ ತಾವು ಸೈಬರ್ ವಂಚಕರ ಬಲೆಗೆ ಬಿದ್ದಿರುವುದನ್ನು ಅರಿತ ಸಂತೋಷ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಲಿಂಕ್ ಕ್ಲಿಕ್ ಮಾಡಿ 2 ಲಕ್ಷ ರೂ. ಕಳಕೊಂಡ ಮಹಿಳೆ: ಕೆಲಸ ಕೊಡಿಸುವ ನೆಪದಲ್ಲಿ ಜೆ.ಪಿ. ನಗರದ ನಿವಾಸಿ ನಂದಿನಿ (43) ಎಂಬುವರಿಗೆ ಸೈಬರ್ ಕಳ್ಳರು 2.4 ಲಕ್ಷ ರೂ. ವಂಚಿಸಿದ್ದಾರೆ. ಕೆಲಸಕ್ಕಾಗಿ ವೆಬ್​ಸೈಟ್​ವೊಂದರಲ್ಲಿ ನಂದಿನಿ ಅರ್ಜಿ ಸಲ್ಲಿಸಿದ್ದರು. ಅ.19ರಂದು ನಂದಿನಿ ಮೊಬೈಲ್​ಗೆ ಕೆಲಸಕ್ಕೆ ಸಂಬಂಧಿಸಿದ ಸಂದೇಶ ಬಂದಿತ್ತು. ಮೆಸೇಜ್​ನಲ್ಲಿದ್ದ ಲಿಂಕ್​ನ್ನು ಕ್ಲಿಕ್ ಮಾಡಿದ ಕೆಲ ಹೊತ್ತಿನಲ್ಲೇ ಅಪರಿಚಿತರು ನಂದಿನಿಗೆ ಕರೆ ಮಾಡಿ, ‘ನಿಮಗೆ ಕೆಲಸ ಕೊಡಿಸುತ್ತೇವೆ. ಇದಕ್ಕಾಗಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಅದಕ್ಕಾಗಿ ನಾವು ಕಳುಹಿಸುವ ಲಿಂಕ್ ಕ್ಲಿಕ್ ಮಾಡಬೇಕು’ ಎಂದು ತಿಳಿಸಿದ್ದರು. ಅದರಂತೆ ಅಪರಿಚಿತರು ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿದ ಕೂಡಲೇ ನಂದಿನಿ ಬ್ಯಾಂಕ್ ಖಾತೆಯಿಂದ 5 ಸಾವಿರ ರೂ. ಕಡಿತ ಆಗಿತ್ತು. ಅಪರಿಚಿತರಿಗೆ ಕರೆ ಮಾಡಿದ ನಂದಿನಿ ಈ ಬಗ್ಗೆ ಪ್ರಶ್ನಿಸಿದಾಗ, ನಿಮ್ಮ ಹಣವನ್ನು ರೀಫಂಡ್ ಮಾಡುತ್ತೇವೆ. ಅದಕ್ಕಾಗಿ ನಾವು ಕಳುಹಿಸುವ ಮತ್ತೊಂದು ಲಿಂಕ್ ಒತ್ತಿ ಎಂದು ಹೇಳಿ ಲಿಂಕ್ ಕಳುಹಿಸಿದ್ದರು. ಅದನ್ನು ನಂದಿನಿ ಒತ್ತಿದಾಗ ಖಾತೆಯಲ್ಲಿದ್ದ 2.4 ಲಕ್ಷ ರೂ. ಕಡಿತವಾಗಿದೆ. ದಕ್ಷಿಣ ಸಿಇಎನ್ ಕ್ರೖೆಂ ಪೊಲೀಸರು ಎರಡು ಪ್ರಕರಣಗಳಲ್ಲಿ ಪ್ರತ್ಯೇಕ 2 ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net