

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಮಾಣ ಶೇಕಡ 400 ಏರಿಕೆಯಾಗಿದೆ. ಈ ಪೈಕಿ ಬಹುತೇಕ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದವು ಎಂದು ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೖೆಮ್್ಸ ರೆಕಾರ್ಡ್ ಬ್ಯೂರೋ (ಎನ್ಸಿಆರ್ಬಿ) ಡೇಟಾ ಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ 2020ರಲ್ಲಿ ದಾಖಲಾಗಿರುವ 842 ಆನ್ಲೈನ್ ಅಪರಾಧ ಕೇಸ್ಗಳ ಪೈಕಿ 738 ಕೇಸ್ಗಳು ಮಕ್ಕಳನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿರುವಂಥದ್ದಾಗಿವೆ. 2019ರಲ್ಲಿ ಮಕ್ಕಳ ವಿರುದ್ಧ ಆಗಿರುವ ಸೈಬರ್ ಅಪರಾಧಗಳ ಸಂಖ್ಯೆ 164, 2018ರಲ್ಲಿ ಇದು 117 ಮತ್ತು 2017ರಲ್ಲಿ ಇದು 79 ಇತ್ತು. 2020ರ ದತ್ತಾಂಶ ಸಣ್ಣ ಪ್ರಮಾಣದ್ದೆಂಬಂತೆ ಭಾಸವಾದರೂ 2019ಕ್ಕೆ ಹೋಲಿಸಿದರೆ ಹೆಚ್ಚಾಗಿರುವ ಪ್ರಮಾಣ ಎಚ್ಚರಿಕೆ ನೀಡುವಂಥದ್ದು. ಯುನಿಸೆಫ್ನ 2020ರ ವರದಿ ಪ್ರಕಾರ, ದಕ್ಷಿಣ ಏಷ್ಯಾದಲ್ಲಿ 25 ವರ್ಷ ಮತ್ತು ಅದರೊಳಗಿನವರ ಪೈಕಿ ಶೇಕಡ 13 ಜನರಿಗೆ ಇಂಟರ್ನೆಟ್ ಸೌಲಭ್ಯ ಮನೆಯಲ್ಲೇ ಸಿಕ್ಕಿದೆ. ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಶಾಲೆ ಹೋಗುವ ಮಕ್ಕಳ (3-17ರ ವಯೋಮಾನ) ಪೈಕಿ ಶೇಕಡ 14 ಮಕ್ಕಳಿಗೆ ಮನೆಯಲ್ಲೇ ಇಂಟರ್ನೆಟ್ ಸೌಲಭ್ಯ ಲಭ್ಯವಿದೆ.
ಮಾರ್ಗದರ್ಶನದ ಅಗತ್ಯ: ಇಂಟರ್ನೆಟ್ ಬಳಕೆ ವಿಚಾರದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆ ಇದೆ. ಆದರೆ ಸಮಾಜದಲ್ಲಿ ಈ ತಿಳಿವಳಿಕೆ ನೀಡಬೇಕಾದವರಿಗೆ ಈ ಬಗ್ಗೆ ಅರಿವಿನ ಕೊರತೆ ಇದೆ. ಇಂಟರ್ನೆಟ್ ಜಗತ್ತಿನಲ್ಲಿ ಮಕ್ಕಳು ಎದುರಿಸುವ, ಎದುರಿಸಬೇಕಾಗುವ ಅಪಾಯಗಳನ್ನು ವಿವರಿಸಬೇಕು. ಇದಕ್ಕಾಗಿ ಒಂದು ಸಾಮಾನ್ಯ ಕೈಪಿಡಿಯ ಕೊರತೆ ಇದೆ. ಈ ಕುರಿತ ಮಾಹಿತಿಗಳು ಹರಿದು ಹಂಚಿ ಹೋಗಿವೆ. ಅವುಗಳನ್ನು ಕ್ರೋಡೀಕರಿಸಿ ಪಾಲಕರಿಗೆ, ಶಿಕ್ಷಣ ನೀಡುವವರಿಗೆ, ಮಕ್ಕಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಮಕ್ಕಳ ಡಿಜಿಟಲ್ ಹಕ್ಕುಗಳು: ಸದ್ಯದ ಪರಿಸ್ಥಿತಿಯಲ್ಲಿ ಡಿಜಿಟಲ್ ಲೋಕದಲ್ಲಿ ಮಕ್ಕಳ ಡಿಜಿಟಲ್ ಹಕ್ಕುಗಳ ಸಂರಕ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಇಂಟರ್ನೆಟ್ ಆಡಳಿತ ನೀತಿ ಮತ್ತು ಮಕ್ಕಳ ರಕ್ಷಣೆ ವಿಚಾರಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಬೇಕಾಗಿದೆ. ಶಾಸನಾತ್ಮಕ ಮತ್ತು ನೀತಿ ನಿಯಮಗಳ ನಡುವೆ ಇರುವ ಅಂತರವನ್ನು ಸರಿದೂಗಿಸುವುದು ಇಂದಿನ ಅವಶ್ಯಕತೆಯಾಗಿದೆ. ಸೈಬರ್ ಬುಲ್ಲಿಯಿಂಗ್, ಸೆಕ್ಸ್ಟಿಂಗ್ ಮುಂತಾದವುಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಮರ್ವಾಹ ಪ್ರತಿಪಾದಿಸಿದ್ದಾರೆ.
ಮಕ್ಕಳ ಮೇಲಿನ ದೌರ್ಜನ್ಯ: ಭಾರತದಲ್ಲಿ ಕಳೆದ ವರ್ಷ ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ 1,28,531 ಇತ್ತು. 2019ರಲ್ಲಿ ಇದು 1,48,185 ಇತ್ತು. ಪ್ರತಿನಿತ್ಯ 400ಕ್ಕೂ ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ, ಅಪರಾಧ ಪ್ರಕರಣ ನಡೆದಿದೆ. ಅಪರಾಧ ಪ್ರಕರಣದಲ್ಲಿ ಇಳಿಕೆಯಾದರೂ, ಆನ್ಲೈನ್ ಅಪರಾಧ ಏರಿಕೆಯಾಗಿದೆ ಎಂದು ವರದಿ ಹೇಳಿದೆ.