ಒಳ ಉಡುಪಿನಲ್ಲಿ ಮರೆಮಾಚಿ ಅಕ್ರಮ ಚಿನ್ನ ಸಾಗಾಟ; ಬಂಧಿತನಿಂದ 53 ಲಕ್ಷ ಮೌಲ್ಯದ ಚಿನ್ನ ವಶ!

Customs officials arrested a passenger who was smuggling illegal gold hidden in underwear
Published on

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದೆ. ವಿದೇಶದಿಂದ ಅಕ್ರಮವಾಗಿ ಚಿನ್ನ ಸೇರಿದಂತೆ ನಿಷೇಧಿತ ಪದಾರ್ಥಗಳನ್ನು ಅಕ್ರಮವಾಗಿ ಸಾಗಟ ಮಾಡುತ್ತಿರುವವರನ್ನು ಆಧಾರ ಸಹಿತವಾಗಿ ಬಂಧಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದೀಗ ಒಳ ಉಡುಪಿನಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್​ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ, ದುಬೈನ ಇಕೆ568 ವಿಮಾನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ವಿಮಾನದಿಂದ ಇಳಿದು ಬರುತ್ತಿದ್ದಂತೆ ಪ್ರಯಾಣಿಕನ ವರ್ತನೆ ಗಮನಿಸಿದ ಕಸ್ಟಮ್ಸ್​ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ 1 ಕೆ.ಜಿ 13 ಗ್ರಾಂ ಚಿನ್ನವನ್ನು ಮರೆಮಾಚಿ ಅಕ್ರಮವಾಗಿ ಸಾಗಟ ಮಾಡುತ್ತಿರುವುದು ಪತ್ತೆಯಾಗಿದೆ. ಕೂಡಲೇ ಪ್ರಯಾಣಿಕನನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿಯಿಂದ 53 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net