

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ 24 ವರ್ಷದ ಯುವಕನೊಬ್ಬ, 19 ವರ್ಷದ ಯುವತಿಗೆ ಮನಬಂದಂತೆ ಥಳಸಿದ್ದಾನೆ. ಯುವತಿಯಿದ್ದಲ್ಲಿಗೆ ಏಕಾಏಕಿ ಬಂದ ಯುವಕ ನನ್ನನ್ನು ಮದುವೆಯಾಗು ಎಂದು ಹೇಳಿ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಯುವಕ ಥಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವಕನ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ಕೇಳಿ ಬರುತ್ತಿದೆ.
ತನ್ನನ್ನು ಮದುವೆಯಾಗು ಎಂದು ಹೇಳುತ್ತಾ, ಯುವತಿಯನ್ನು ನೆಲಕ್ಕೆ ತಳ್ಳಿ, ಕಾಲಿನಿಂದ ನಿರಂತರವಾಗಿ ಮುಖಕ್ಕೆ ಹಲ್ಲೆ ಮಾಡಿದ್ದಾನೆ. ನಂತರ ಯುವಕ ಹಾಗೂ ವಿಡಿಯೋ ಮಾಡಿದ ಆತನ ಸ್ನೇಹಿತ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದುದರಿಂದ ಯುವತಿ ತಾಸುಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಳೆ. ನಂತರ ರಸ್ತೆ ದಾರಿಯಲ್ಲಿ ಸಾಗುತ್ತಿದ್ದ ಸ್ಥಳೀಯ ಯುವತಿಯ ಪರಿಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರು ಇಬ್ಬರ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ. ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿಗೆ ಮನಬಂದಂತೆ ಹಲ್ಲೆ ಮಾಡಿದಾತ ಪಂಕಜ್ ತ್ರಿಪಾಠಿ ಎಂದು ವರದಿಯಾಗಿದೆ.
ಪಂಕಜ್ ತ್ರಿಪಾಠಿ ಸಂತ್ರಸ್ತ ಯುವತಿಯನ್ನು ಮದುವೆಯಾಗಲು ಬಯಸಿದ್ದ. ಇದಕ್ಕೆ ಯುವತಿ ಹಾಗೂ ಯುವತಿಯ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಕೋಪಗೊಂಡ ಪಂಕಪ್ ಏಕಾಏಕಿ ಬಂದು ಯುವತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದಾಗಿ ವಿಚಾರಣೆಯ ವೇಳೆ ಆರೋಪಿ ತಿಳಿಸಿರುವುದಾಗಿ ರೇವಾ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)