

ಹರಿಯಾಣ: ಬಿಟ್ಟಿ ಪ್ರಚಾರಕ್ಕೆ ಒಂದಷ್ಟು ನೋಟುಗಳನ್ನು ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಮೇಲ್ಸೇತುವೆ ಮೇಲಿಂದ ವ್ಯಕ್ತಿಯೊಬ್ಬ ಎಸೆದ ಪ್ರಕರಣವನ್ನು ನೆನಪಿಸುವಂಥ ಘಟನೆ ಇದು. ಇಲ್ಲೊಂದಿಬ್ಬರು ಯುವಕರು ಕಾರಿನಲ್ಲಿ ಹೋಗುತ್ತ ನೋಟುಗಳನ್ನು ರಸ್ತೆ ತುಂಬಾ ಎಸೆಯುತ್ತ ಹೋಗಿದ್ದಾರೆ.
ಇಬ್ಬರು ಯುವಕರು ಕಾರಿನಲ್ಲಿ ಹೋಗುತ್ತ ರಸ್ತೆ ಮೇಲೆ ನೋಟುಗಳನ್ನು ಎಸೆಯುತ್ತ ಹೋಗಿದ್ದಾರೆ. ಈ ದೃಶ್ಯಾವಳಿಯ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕುತೂಹಲ ಕೆರಳಿಸಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಒಂದಷ್ಟು ಮಾಹಿತಿ ಪತ್ತೆ ಮಾಡಿದ್ದಾರೆ.
ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಗುರುತಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಅದರಲ್ಲೂ ಆರೋಪಿಗಳು ಸಿನಿಮಾವೊಂದರ ದೃಶ್ಯವನ್ನು ಮರುಸೃಷ್ಟಿ ಮಾಡುವ ಸಲುವಾಗಿ ಈ ಕೃತ್ಯ ಎಸಗಿದ್ದರು ಎಂಬುದನ್ನೂ ತಿಳಿಸಿದ್ದಾರೆ.