

ಈಚಿನ ವರ್ಷಗಳಲ್ಲಿ ಜಾಗತಿಕವಾಗಿ ಆತಂಕ ಮೂಡಿಸಿರುವ ತಾಪಮಾನ ಹೆಚ್ಚಳದ ಕಾರಣಗಳಲ್ಲಿ ವಾಯುಮಾಲಿನ್ಯ ಕೂಡ ಪ್ರಮುಖವಾದುದು. ಕೈಗಾರಿಕೆಗಳು, ವಾಹನಗಳು ಇತ್ಯಾದಿಗಳಿಂದ ಉಂಟಾಗುವ ಮಾಲಿನ್ಯ ಹಲವು ಬಗೆಗಳಲ್ಲಿ ಅಪಾಯಕರ. ವಾಹನಗಳ ವಿಷಯದಲ್ಲಿ ಗಮನಿಸಬೇಕಾದ್ದೆಂದರೆ, ಜನರ ಆರ್ಥಿಕ ಶಕ್ತಿ ಹೆಚ್ಚಿದಂತೆಲ್ಲ ವಾಹನೋದ್ಯಮ ರಂಗ ಗರಿಗೆದರುತ್ತದೆ. ಆಟೊಮೊಬೈಲ್ ಕ್ಷೇತ್ರವು ಲಕ್ಷಾಂತರ ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ಹೊಂದಿದ್ದು, ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ವಲಯವೂ ಹೌದು. ಹೀಗಾಗಿ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬವೊಂದು ಹೊಂದಬಹುದಾದ ವಾಹನಗಳಿಗೆ ಮಿತಿ ವಿಧಿಸಬೇಕೆಂಬ ವಾದವೂ ಇದೆ.
ಇದೇನೇ ಇದ್ದರೂ, ವಾಹನಗಳಿಂದಾಗುವ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲ ಕ್ರಮಗಳಂತೂ ಆಗುತ್ತಿವೆ. ಹದಿನೈದು ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ಗುಜರಿಗೆ ಹಾಕುವ ಯೋಜನೆ ಈಗಾಗಲೇ ಜಾರಿಯಾಗಿದೆ. ಇದರ ಮುಂದುವರಿದ ಭಾಗವಾಗಿ, ದೇಶದ ಪ್ರಮುಖ ನಗರಗಳಲ್ಲಿ 2027ರ ಒಳಗೆ ಡೀಸೆಲ್ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆ ಸ್ಥಗಿತಗೊಳಿಸಬೇಕು ಎಂದು ಕೇಂದ್ರ ಇಂಧನ ಸಚಿವಾಲಯದ ಸಮಿತಿಯೊಂದು ಶಿಫಾರಸು ಮಾಡಿದೆ. ಇದಲ್ಲದೆ, ಅನಿಲ ಹೊರಸೂಸುವಿಕೆ ನಿಲ್ಲಿಸುವ ಸಲುವಾಗಿ, 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ, ಮಾಲಿನ್ಯಪೀಡಿತ ಪಟ್ಟಣಗಳಲ್ಲಿ ವಿದ್ಯುಚ್ಚಾಲಿತ ಮತ್ತು ಗ್ಯಾಸ್ಚಾಲಿತ ವಾಹನಗಳನ್ನು ಬಳಸಬೇಕು ಎಂದು ಈ ಸಮಿತಿ ಹೇಳಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರ ಒಪು್ಪವುದೇ ಎಂಬುದನ್ನು ಕಾದುನೋಡಬೇಕಿದೆ.
ಇನ್ನೊಂದೆಡೆ, ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ದೇಗನಾ ಎಂಬಲ್ಲಿ ಬೃಹತ್ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದು ಮಹತ್ವದ ಬೆಳವಣಿಗೆ. ಲೀಥಿಯಂ ಅಪರೂಪದ ಖನಿಜವಾಗಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಬ್ಯಾಟರಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಕೆಲ ತಿಂಗಳ ಹಿಂದೆ ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿ ಈ ನಿಕ್ಷೇಪ ಪತ್ತೆಯಾಗಿತ್ತು. ಇದು ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಲೀಥಿಯಂ ನಿಕ್ಷೇಪ. ಇಲ್ಲಿ ಸುಮಾರು 5.90 ದಶಲಕ್ಷ ಟನ್ ಖನಿಜ ಇರಬಹುದೆಂದು ಅಂದಾಜಿಸಲಾಗಿದೆ. ಈಗ ರಾಜಸ್ಥಾನದಲ್ಲಿ ಕಂಡುಬಂದಿರುವ ಲೀಥಿಯಂ ನಿಕ್ಷೇಪ ಎಷ್ಟಿದೆ ಎಂಬ ಅಂದಾಜು ಮಾಡಿಲ್ಲವಾದರೂ, ಕಾಶ್ಮೀರದಕ್ಕಿಂತ ಅನೇಕ ಪಟ್ಟು ಹೆಚ್ಚಿಗೆಯಿರಬಹುದೆಂದು ಊಹಿಸಲಾಗಿದೆ. ಭವಿಷ್ಯದಲ್ಲಿ ಭಾರತದ ಶೇ.80ರಷ್ಟು ಲೀಥಿಯಂ ಬೇಡಿಕೆಯನ್ನು ಈಡೇರಿಸಬಹುದೆಂಬುದು ತಜ್ಞರ ಲೆಕ್ಕಾಚಾರ.
ಕೇಂದ್ರ ಮತ್ತು ಅನೇಕ ರಾಜ್ಯ ಸರ್ಕಾರಗಳು ಈಚಿನ ದಿನಗಳಲ್ಲಿ ಇ-ವಾಹನಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿವೆ. 2030 ರ ಹೊತ್ತಿಗೆ ಭಾರತದ ರಸ್ತೆಗಳಲ್ಲಿ 14 ಲಕ್ಷ ಇ-ವಾಹನಗಳು ಸಂಚರಿಸುತ್ತಿರಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ. ಈ ಉದ್ದೇಶ ಈಡೇರಿಕೆಯಲ್ಲಿ ಲೀಥಿಯಂ ನಿಕ್ಷೇಪದ ಪತ್ತೆ ಮಹತ್ವದ್ದು. ಹಾಗಂತ ನಾಳೆ ಬೆಳಗ್ಗೆಯೇ ಇ-ವಾಹನಗಳಲ್ಲಿ ಲೀಥಿಯಂ ಬಳಕೆ ಶುರುವಾಗಿಬಿಡುತ್ತದೆ ಎಂದಲ್ಲ. ಅದಕ್ಕೆ ಬಹಳ ಪ್ರಕ್ರಿಯೆ ಇದೆ. ಆದರೂ, ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಲೀಥಿಯಂ ಖನಿಜ ಇದೆಯೆಂಬುದು ಮಹತ್ವದ್ದು. ಸರ್ಕಾರಗಳು ಸೂಕ್ತ ನೀತಿ, ಮುನ್ನೋಟದಲ್ಲಿ ಕಾರ್ಯಗೈದರೆ ದೊಡ್ಡ ಬದಲಾವಣೆ ತರುವ ಸಾಧ್ಯತೆಯಂತೂ ಇದೆ.