

ಯುವಕರ ಆಶೋತ್ತರಗಳನ್ನು ಈಡೇರಿಸಲು, ಅವರ ಕನಸುಗಳನ್ನು ನನಸಾಗಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಬಹುತೇಕ ರಾಜಕೀಯ ಪಕ್ಷಗಳು ಹೇಳುತ್ತವೆ. ಅದರಲ್ಲೂ, ಚುನಾವಣೆ ಸಮಯದಲ್ಲಿ ಯುವ ಮತಬ್ಯಾಂಕ್ನ್ನು ಗಮನದಲ್ಲಿ ಇರಿಸಿ ಸರಣಿ ಆಶ್ವಾಸನೆಗಳನ್ನೇ ನೀಡಲಾಗುತ್ತದೆ. ಆದರೆ, ಯುವಸಮುದಾಯದ ಹಿತಕ್ಕೆ ಮಾರಕವಾಗುವ ನೀತಿಗಳನ್ನು ಬದಲಿಸಲು ದೀರ್ಘಸಮಯವೇ ಬೇಕಾಗುತ್ತದೆ ಎಂಬುದು ದುರದೃಷ್ಟಕರ. ಉದ್ಯೋಗ ಗಿಟ್ಟಿಸಿ, ಉತ್ತಮ ಬದುಕು ರೂಪಿಸಿಕೊಳ್ಳುವ ಆಶಯದಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಹಗಲು-ರಾತ್ರಿ ಕಷ್ಟಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಾರೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿ ನಕಲು, ನಕಲಿ ಪ್ರವೇಶಪತ್ರ ಹೀಗೆ ಹಲವು ಅಪಸವ್ಯಗಳಿಂದ ಪರೀಕ್ಷಾ ವ್ಯವಸ್ಥೆಯೇ ಇತ್ತೀಚಿನ ದಿನಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಇಂಥ ಘಟನೆಗಳು ದೇಶದ ಎಲ್ಲ ರಾಜ್ಯಗಳಲ್ಲಿ ನಡೆಯುತ್ತಿದ್ದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ, ಬರೆಯುವ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿರುವುದಂತೂ ಹೌದು.
ಹಾಗಾಗಿಯೇ, ಪರೀಕ್ಷಾ ಅಕ್ರಮಗಳಲ್ಲಿ ಶಾಮೀಲಾಗುವ ಜಾಲಗಳ ವಿರುದ್ಧ ಕಾನೂನು ರೂಪಿಸುವ ಮೊದಲ ಹೆಜ್ಜೆಯಾಗಿ, ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ, ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಮಸೂದೆ-2024 ಫೆ. 6ರಂದು ಅಂಗೀಕಾರಗೊಂಡಿದೆ. ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾದ ಬಳಿಕ, ರಾಷ್ಟ್ರಪತಿಗಳ ಅಂಕಿತದೊಡನೆ ಕಾನೂನಿನ ರೂಪ ಪಡೆದುಕೊಳ್ಳಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ 10 ವರ್ಷಗಳ ಜೈಲು ಶಿಕ್ಷೆ, ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳನ್ನು ಇದರಿಂದ ಹೊರಗೆ ಇಟ್ಟಿರುವುದು ಒಳ್ಳೆಯದು. ಆದರೆ, ಪರೀಕ್ಷಾ ಅಕ್ರಮದ ಜಾಲಗಳನ್ನೇ ನಿರ್ವಿುಸಿಕೊಂಡಿರುವ, ಇದನ್ನೇ ದುಡ್ಡು ಮಾಡುವ ಸಾಧನವಾಗಿಸಿಕೊಂಡಿರುವ ದುಷ್ಕರ್ವಿುಗಳಿಗೆ ಈ ಮಸೂದೆ ನಡುಕ ತಂದಿರಲಿಕ್ಕೂ ಸಾಕು. ಇದು ಕಾನೂನಾಗಿ ಪರಿವರ್ತನೆಯಾದ ಬಳಿಕ ಪೊಲೀಸರು ಶಂಕಿತರನ್ನು ವಾರೆಂಟ್ ಇಲ್ಲದೆ ಬಂಧಿಸಬಹುದು ಮತ್ತು ಬಂಧನದ ಬಳಿಕ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಅನಧಿಕೃತ ಪ್ರವೇಶ ಅಥವಾ ಪ್ರಶ್ನೆಪತ್ರಿಕೆ ಅಥವಾ ಉತ್ತರ ಕೀ ಸೋರಿಕೆ, ಸಾರ್ವಜನಿಕ ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗೆ ಪರೋಕ್ಷ ಅಥವಾ ಅಪರೋಕ್ಷವಾಗಿ ಸಹಾಯ ಮಾಡುವುದು, ಕಂಪ್ಯೂಟರ್ ನೆಟ್ವರ್ಕ್ಗಳಲ್ಲಿ ಮಾರ್ಪಾಡು, ನಕಲಿ ಪರೀಕ್ಷೆಯನ್ನು ನಡೆಸುವುದು, ನಕಲಿ ಪ್ರವೇಶಪತ್ರಗಳು ಮತ್ತು ಆಫರ್ಲೇಟರ್ಗಳನ್ನು ನೀಡುವುದು ಸೇರಿದಂತೆ ಹಲವು ಅಪರಾಧಗಳು ಪರೀಕ್ಷಾ ಅಕ್ರಮದ ವ್ಯಾಪ್ತಿಗೆ ಬರುತ್ತವೆ.
ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು, ನ್ಯಾಯಸಮ್ಮತವಾಗಿ ಮತ್ತು ವಿಶ್ವಾಸಾರ್ಹತೆಯಿಂದ ಪರೀಕ್ಷೆ ನಡೆಸಲು ಇದರಿಂದ ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿದ್ಯಾರ್ಥಿಗಳ ಮತ್ತು ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳ ಭವಿಷ್ಯ ಸುರಕ್ಷಿತವಾಗಿದೆ, ಪರೀಕ್ಷೆಯಿಂದ ಹಿಡಿದು, ಫಲಿತಾಂಶ ಘೋಷಣೆ, ನೇಮಕಾತಿವರೆಗೆ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲ ಎಂಬ ಭರವಸೆ ಯುವಕರಲ್ಲಿ ಬಂದರೆ ಖಂಡಿತವಾಗಿಯೂ ಅವರ ಆತ್ಮಸ್ಥೈರ್ಯ ಹೆಚ್ಚಿಸಬಹುದು. ಮತ್ತು ಕಠಿಣ ಕ್ರಮಗಳ ಮೂಲಕ ಪರೀಕ್ಷಾ ಅಕ್ರಮ ಜಾಲಗಳನ್ನು ಸದೆಬಡಿದು, ವ್ಯವಸ್ಥೆಯ ಶುದ್ಧೀಕರಣಕ್ಕೆ ಪರಿಣಾಮಕಾರಿಯಾಗಿ ಶ್ರಮಿಸಲು ಇದು ಸಕಾಲ.