

ಬೆಂಗಳೂರು: ವಿಧಾನಪರಿಷತ್ನಲ್ಲಿ ಸಚಿವೆ ಲಕ್ಷಿ್ಮೕ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿದ ಆರೋಪದಡಿ ಗುರುವಾರ ರಾತ್ರಿ ಬಂಧಿತರಾಗಿದ್ದ ಬಿಜೆಪಿ ಮುಖಂಡ ಸಿ.ಟಿ.ರವಿ 24 ಗಂಟೆಗಳ ಹೈಡ್ರಾಮಾ ಬಳಿಕ ಹೈಕೋರ್ಟ್ ಆದೇಶದ ಪ್ರಕಾರ ಬಿಡುಗಡೆ ಆಗಿದ್ದಾರೆ. ಮತ್ತೊಂದೆಡೆ ರವಿ ಬಂಧನದಿಂದ ಸಿಡಿದೆದ್ದಿರುವ ಬಿಜೆಪಿ ನಾಯಕರು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಹೈಕೋರ್ಟ್ ಆದೇಶ: ಪೊಲೀಸರು ದಾಖಲಿಸಿರುವ ಪ್ರಕರಣ ರದ್ದಗೊಳಿಸಬೇಕು ಮತ್ತು ಅಕ್ರಮವಾಗಿ ಬಂಧಿಸಿರುವ ತಮ್ಮನ್ನು ತಕ್ಷಣ ಬಿಡುಗಡೆಗೊಳಿಸಲು ಆದೇಶಿಸಬೇಕೆಂದು ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ ಉಮಾ ಅವರ ಏಕಸದಸ್ಯ ಪೀಠ, ತಕ್ಷಣವೇ ರವಿ ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತು. ಆದೇಶದ ಬೆನ್ನಲ್ಲೇ ಪೊಲೀಸರು ಸಿಟಿ ರವಿ ಅವರನ್ನು ದಾವಣಗೆರೆಯಲ್ಲಿ ಬಿಡುಗಡೆ ಮಾಡಿದರು.
ದೂರುದಾರರು (ಲಕ್ಷ್ಮಿ ಹೆಬ್ಬಾಳ್ಕರ್) ಮತ್ತು ಅರ್ಜಿದಾರರು (ಸಿ.ಟಿ.ರವಿ) ಇಬ್ಬರೂ ಜನಪ್ರತಿನಿಧಿಗಳು. ಆದರೆ, ವಿಧಾನಪರಿಷತ್ನಲ್ಲಿ ಈ ರೀತಿಯಾಗಿರುವುದು ದುರದೃಷ್ಟಕರ ಸಂಗತಿ. ವ್ಯಕ್ತಿಯ ಸ್ವಾತಂತ್ರ್ಯ ಹರಣವಾದಾಗ ಅದನ್ನು ರಕ್ಷಿಸುವುದು ಹೈಕೋರ್ಟ್ ಕರ್ತವ್ಯ. ರವಿ ಅವರನ್ನು ವಶಕ್ಕೆ ಪಡೆದಿರುವ ರೀತಿಯ ಬಗ್ಗೆ ಏನು ಹೇಳುತ್ತೀರಿ? ಬಂಧನಕ್ಕೆ ಕಾರಣ ತಿಳಿಸದೆ ನೀವು ಹೇಗೆ ಬಂಧಿಸಿದ್ದೀರಿ? ಎಂದು ಪ್ರಶ್ನಿಸಿತು.
ಗಂಭೀರ ಅಪರಾಧ ಪ್ರಕರಣಗಳಲ್ಲೂ ಪೊಲೀಸರು ವರ್ಷಗಟ್ಟಲೆ ಬಂಧಿಸುವುದಿಲ್ಲ. ರವಿ ಅವರನ್ನು ವಶಕ್ಕೆ ಪಡೆದಿರುವ ರೀತಿ, ಬಳಿಕ ಅವರನ್ನು ನಡೆಸಿಕೊಂಡ ಬಗೆ ಮತ್ತು ಅವರ ಮೇಲಾಗಿರುವ ಹಲ್ಲೆಯ ಬಗ್ಗೆ ಏನು ಉತ್ತರಿಸುತ್ತೀರಿ ಎಂದು ಸರ್ಕಾರಿ ಪರ ವಕೀಲರನ್ನು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.
ರಾಜ್ಯದ ಜನತೆಯ ದೃಷ್ಟಿಯಿಂದ ಆರೋಪಿತ ಘಟನೆಯು ಅಹಿತಕರ ಸಂಗತಿಯಾಗಿದೆ. ರವಿ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು, ಅವರು ತನಿಖೆಗೆ ಲಭ್ಯವಾಗುವುದಿಲ್ಲ ಎಂಬ ಪರಿಸ್ಥಿತಿ ಉದ್ಭವಿಸಲ್ಲ. ಬೆಳಗಾವಿಯ ಸುವರ್ಣ ಸೌಧದ ವಿಧಾನ ಪರಿಷತ್ನಲ್ಲಿ ನಡೆದಿರುವ ಘಟನೆಯ ಬಗ್ಗೆ ಸಭಾಪತಿಗಳು ಏನನ್ನೂ ಉಲ್ಲೇಖಿಸಿಲ್ಲ. ರವಿ ಅವರು ತಕ್ಷಣ ಬಿಡುಗಡೆ ಸಂಬಂಧಿತ ಮಧ್ಯಂತರ ಕೋರಿಕೆಗೆ ಅರ್ಹರಾಗಿದ್ದಾರೆ. ಹೀಗಾಗಿ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು. ಜತೆಗೆ ತನಿಖಾಧಿಕಾರಿ ಸೂಚಿಸಿದಾಗ ರವಿ ತನಿಖೆಗೆ ಹಾಜರಾಗಬೇಕು ಎಂಬ ಷರತ್ತನ್ನು ವಿಧಿಸಿದೆ.
ಇದಕ್ಕೂ ಮುನ್ನ ಸಿ.ಟಿ.ರವಿ ಪರ ವಕೀಲ ಸಂದೇಶ ವಾದ ಮಂಡಿಸಿ, ಆರೋಪಿ ಹಾಗೂ ದೂರುದಾರೆ ಇಬ್ಬರು ರಾಜಕೀಯ ಮುಖಂಡರು. ಪ್ರಕರಣ ಸಂಬಂಧ ಅರ್ಜಿದಾರರಿಗೆ ಪೊಲೀಸರು ನೋಟಿಸ್ ನೀಡದೆ ಅಕ್ರಮವಾಗಿ ಬಂಧಿಸಿದ್ದಾರೆ. ಆರೋಪಗಳಿಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದೆ. 41 (ಎ) ಅನ್ವಯ ಕಡ್ಡಾಯವಾಗಿ ನೋಟಿಸ್ ನೀಡಬೇಕಿತ್ತು. ಅಲ್ಲದೇ, ಅವರ ಬಂಧನಕ್ಕೆ ಆಧಾರ ಒದಗಿಸಿಲ್ಲ. ಬಂಧನಕ್ಕೂ ಮೊದಲು ಪೊಲೀಸರು ಸಮರ್ಪಕ ಕಾರಣಗಳನ್ನು ನೀಡಬೇಕಿತ್ತು. ಆದರೆ, ಪೊಲೀಸರು ಈ ಬಗ್ಗೆ ದಾಖಲೆಗಳಲ್ಲಿಯೂ ಉಲ್ಲೇಖಿಸಿಲ್ಲ. ಬಂಧಿಸುವ ಸಂದರ್ಭ ಪೊಲೀಸರು ಹಲ್ಲೆ ನಡೆಸಿದ್ದರಿಂದ ಅರ್ಜಿದಾರರಿಗೆ ಗಾಯಗಳಾಗಿವೆ. ಒಟ್ಟಾರೆಯಾಗಿ ಪೂರ್ಣ ಪ್ರಕ್ರಿಯೆ ಕಾನೂನಿಗೆ ವಿರುದ್ಧವಾಗಿದ್ದು ಪ್ರಕರಣ ರದ್ದುಗೊಳಿಸಬೇಕು ಹಾಗೂ ಅರ್ಜಿದಾರರನ್ನು ಈ ಕೂಡಲೇ ಬಂಧಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಎ ಬೆಳ್ಳಿಯಪ್ಪ ವಾದ ಮಂಡಿಸಿ, ರವಿ ಅವರನ್ನು ಟ್ರಾನ್ಸಿಟ್ ರಿಮ್ಯಾಂಡ್ ಮೇಲೆ ಬೆಂಗಳೂರಿಗೆ ಕರೆತರಲಾಗುತ್ತಿದೆ. ಜಾಮೀನು ಕೋರಿ ಅವರು ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು. ಬಂಧನ ಅಕ್ರಮ ಎನ್ನುವುದಾದರೆ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಿ ಎಂದರು. ಜತೆಗೆ ಪ್ರಕರಣ ಸಂಬಂಧ ಅರ್ಜಿದಾರರು ಪೊಲೀಸ್ ಕಸ್ಟಡಿಯಲ್ಲಿ ಮನಬಂದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ಬೇಡಿದರೂ ಅವರು ತನಿಖೆಗೆ ಸಹಕರಿಸಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರಂತೆ ಪೊಲೀಸ್ ಕಸ್ಟಡಿಯಲ್ಲಿ ವರ್ತಿಸಿದ್ದಾರೆ ಈ ತುಣುಕು ದೃಶ್ಯ ಮಾಧ್ಯಮದಲ್ಲೂ ಪ್ರಸಾರವಾಗಿದೆ ಎಂದು ಎಸ್.ಎ ಬೆಳ್ಳಿಯಪ್ಪ ವಿವರಣೆ ನೀಡಿದರು.
ಜಾಮೀನು ಅರ್ಜಿ ಮುಂದೂಡಿಕೆ: ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಮುನ್ನವೇ ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿ.ಟಿ. ರವಿ ಅರ್ಜಿ ಸಲ್ಲಿಸಿದ್ದರು. ಕೆಲಕಾಲ ಅರ್ಜಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ಶನಿವಾರ (ಡಿ.21)ಕ್ಕೆ ಮುಂದೂಡಿತ್ತು.
ಪ್ರಕರಣ ಬೆಂಗಳೂರಿಗೆ ಶಿಫ್ಟ್: ಸಿ.ಟಿ.ರವಿ ಅನುಚಿತ ಪದ ಬಳಸಿದ ಪ್ರಕರಣವನ್ನು ಶುಕ್ರವಾರ ಜಿಲ್ಲಾ 5ನೇ ಹೆಚ್ಚುವರಿ ಜಿಎಂಎಫ್ ನ್ಯಾಯಾಲಯ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತು. ಸಿ.ಟಿ. ರವಿ ಜಾಮಿನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸ್ಪರ್ಶ ಡಿಸೋಜಾ ತೀರ್ಪನ್ನು ಮಧ್ಯಾಹ್ನ ಪ್ರಕಟಿಸುವುದಾಗಿ ತಿಳಿಸಿದ್ದರು. ಆದರೆ, ತೀರ್ಪು ಪ್ರಕಟಿಸುವ ಮುನ್ನವೇ ಜಾಮೀನು ಅರ್ಜಿ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದರು. ಬಿಜೆಪಿ ರಾಜ್ಯ ವಕ್ತಾರ ಹಾಗೂ ವಕೀಲರಾದ ಎಂ.ಬಿ.ಝೀರಲಿ ತಂಡ ಸಿ.ಟಿ. ರವಿ ಪರ ವಾದ ಮಂಡಿಸಿತು.
ನ್ಯಾಯಾಲಯದ ಮುಂದೆ ಹಾಜರಾದ ಸಿ.ಟಿ.ರವಿ, ‘ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಎಂಬುದಕ್ಕೆ ಪೊಲೀಸರು ಉತ್ತರಿಸಿಲ್ಲ. ಗುರುವಾರ ರಾತ್ರಿಯಿಂದ ನನ್ನ ಮೇಲೆ ಮೂರು ಬಾರಿ ಹಲ್ಲೆ ನಡೆದಿದೆ. ಸುತ್ತಲೂ ಪೊಲೀಸರು ಇದ್ದರೂ ಹಲ್ಲೆ ನಡೆದಿದೆ. ನನ್ನನ್ನು ಕರೆದುಕೊಂಡು ಸುತ್ತಾಡುತ್ತಿದ್ದ ಪೊಲೀಸರಿಗೆ ಪ್ರತಿ 10 ರಿಂದ 15 ನಿಮಿಷಕ್ಕೆ ಮೊಬೈಲ್ ಕರೆ ಬರುತ್ತಿದ್ದವು. ಅದರಲ್ಲಿ ಬಂದ ನಿರ್ದೇಶನದಂತೆ ಪೊಲೀಸರು ವರ್ತನೆ ಮಾಡಿದ್ದಾರೆ. ನಾನು ಕೊಟ್ಟ ದೂರನ್ನು ಪೊಲೀಸರು ಸ್ವೀಕರಿಸಲಿಲ್ಲ’ ಎಂದು ಆರೋಪಿಸಿದರು.
ಹಿರೇಬಾಗೇವಾಡಿ ಠಾಣೆ ಪೊಲೀಸರು ಬಿಗಿ ಭದ್ರತೆಯಲ್ಲಿ ಸಿ.ಟಿ. ರವಿ ಅವರನ್ನು ನ್ಯಾಯಾಲಯಕ್ಕೆ ಕರೆ ತರುತ್ತಿದ್ದಂತೆ ನ್ಯಾಯಾಲಯಕ್ಕೆ ದೌಡಾಯಿಸಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಸುನೀಲ್ಕುಮಾರ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ ಹಾಗೂ ಬಿಜೆಪಿ ಮುಖಂಡರು ಸಿ.ಟಿ.ರವಿ ಅವರೊಂದಿಗೆ ರ್ಚಚಿಸಿದರು.
CT Ravi ವಿಧಾನಪರಿಷತ್ ಘಟನೆ ಸಂಬಂಧ ತನಿಖೆಗೆ ಮೊದಲೇ ಶಾಸಕ ಸಿ.ಟಿ.ರವಿ ಬಂಧಿಸಿದ್ದನ್ನು ಖಂಡಿಸಿ ಬಿಜೆಪಿ ಸಿಡಿದೆದ್ದಿದೆ. ಇದು ಸರ್ಕಾರದ ದ್ವೇಷ ರಾಜಕಾರಣ ಎಂದು ಆರೋಪಿಸಿ ಜಿಲ್ಲಾ ಕೇಂದ್ರಗಳಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಕಳವಳ ವ್ಯಕ್ತಪಡಿಸಿದ ಹೈಕೋರ್ಟ್
ಬಿಜೆಪಿ ಆಕ್ರೋಶ ಏಕೆ?
ಸಿ.ಟಿ. ರವಿ ಮಹಿಳಾ ಸಚಿವರ ವಿರುದ್ಧ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ, ಇದಕ್ಕೆ ಬಿಜೆಪಿಯವರು ಬೆಂಬಲ ನೀಡುತ್ತಾರೆಯೇ? ತಪ್ಪು ಮಾಡದೆ ಪೊಲೀಸರು ಸುಮ್ಮನೇ ಏಕೆ ಬಂಧಿಸುತ್ತಾರೆ? ಸಾಮಾನ್ಯವಾಗಿ ಯಾವುದೇ ಮಹಿಳೆಯರು ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡುವುದಿಲ್ಲ. ಹಾಗಾಗಿ ಸಿ.ಟಿ. ರವಿ ಕೆಟ್ಟ ಪದ ಬಳಸಿರುವುದು ಅಪರಾಧ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ರಾಜ್ಯಾದ್ಯಂತ ತುಘಲಕ್ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಕಾರ್ಯಕರ್ತರ ಬೆಂಬಲ ನನ್ನ ಶಕ್ತಿಯನ್ನು ಇಮ್ಮಡಿಗೊಳಿಸಿದೆ, ದುಷ್ಟ ಶಕ್ತಿಗಳ ವಿರುದ್ಧ ಇನ್ನೂ ಹೆಚ್ಚಾಗಿ ಹೋರಾಡಲು ಶಕ್ತಿ ತುಂಬಿದೆ. ಕರ್ನಾಟಕವನ್ನು ಗೂಂಡಾ ರಿಪಬ್ಲಿಕ್ ಮಾಡಲು ಅವಕಾಶ ಕೊಡುವುದಿಲ್ಲ.
| ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯ