ಮುಂಬೈ ರಕ್ಷಣೆಗೀಗ ಕೇಂದ್ರೀಯ ಪಡೆಗಳೇ ದಿಕ್ಕು...! ಏನಾಗಿದೆ ಪೊಲೀಸರಿಗೆ?

CRPF
Published on

ಮುಂಬೈ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಅದರಲ್ಲಿ ಮಹಾರಾಷ್ಟ್ರದ ಪಾಲು ಶೇ.35ಕ್ಕೂ ಅಧಿಕ ಅಂದರೆ 35,000ಕ್ಕೂ ಅಧಿಕ ರೋಗಿಗಳು ಮಹಾರಾಷ್ಟ್ರದಲ್ಲಿಯೇ ಇದ್ದಾರೆ. ಅದರಲ್ಲೂ ಮುಖ್ಯವಾಗಿ ಮುಂಬೈವೊಂದರಲ್ಲಿಯೇ ಕೋವಿಡ್​ ಪೀಡಿತರ ಸಂಖ್ಯೆ 21 ಸಾವಿರಕ್ಕೂ ಹೆಚ್ಚು.

ಇದಲ್ಲದೇ, ಮುಂಬೈನಿಂದ ತೆರಳುತ್ತಿರುವ ವಲಸೆ ಕಾರ್ಮಿಕರು ಆಯಾ ರಾಜ್ಯಗಳಲ್ಲಿ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ. ಕರ್ನಾಟಕದಲ್ಲೂ ಮುಂಬೈ ನಂಟಿನಿಂದ ಹಬ್ಬುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕರೊನಾ ಜನ್ಮಸ್ಥಳವಾದ ಚೀನಾದ ವುಹಾನ್​ಗೆ ಮುಂಬೈಯನ್ನು ಹೋಲಿಸಲಾಗುತ್ತಿದೆ.

ಇದೆಲ್ಲ ಒಂದು ಕಡೆಯಾದರೆ, ಕರೊನಾ ಸಮಯದಲ್ಲಿ ಮಹಾನಗರದ ರಕ್ಷಣೆಗೆ ನಿಯೋಜಿತರಾದ ಪೊಲೀಸರಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹಬ್ಬುತ್ತಿದೆ. ಅಂದಾಜು ಒಂದೂವರೆ ಸಾವಿರಕ್ಕೂ ಅಧಿಕ ಪೊಲೀಸರು ಸೋಂಕಿಗೆ ತುತ್ತಾಗಿದ್ದಾರೆ. ಮುಂಬೈವೊಂದರಲ್ಲಿಯೇ 8 ಪೊಲೀಸರು ಕರೊನಾಗೆ ಬಲಿಯಾಗಿದ್ದರೆ, ರಾಜ್ಯದಲ್ಲಿ ಕೋವಿಡ್​ನಿಂದಾಗಿ ಮೃತಪಟ್ಟ ಪೊಲೀಸರು 11. ಮೂರು ದಿನಗಳ ಹಿಂದಷ್ಟೇ ಎಎಸ್​ಐವೊಬ್ಬರು ಮೃತಪಟ್ಟಿದ್ದಾರೆ. ಇಡೀ ಕರ್ನಾಟಕದಲ್ಲಿ ಕಂಡುಬಂದಿರುವ ಸೋಂಕಿತರ ಸಂಖ್ಯೆಗಿಂತಲೂ ಮುಂಬೈ ಪೊಲೀಸರಲ್ಲಿ ಕಂಡುಬಂದಿರುವ ಸಂಖ್ಯೆಯೇ ಹೆಚ್ಚು.

ಸದ್ಯ 50ಕ್ಕಿಂತ ಹೆಚ್ಚು ವಯಸ್ಸಾದ ಪೊಲೀಸರನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿಲ್ಲ. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಜೆ ಮೇಲೆ ಕಳುಹಿಸಲಾಗುತ್ತಿದೆ.

ಈ ಎಲ್ಲ ಕಾರಣದಿಂದಾಗಿ ಮುಂಬೈನಲ್ಲಿ ಪೊಲೀಸ್​ ಸಿಬ್ಬಮದಿ ಕರತೆ ಉಂಟಾಗಿದೆ. ಆದ್ದರಿಂದ ಕೇದ್ರೀಯ ಪಡೆಗಳ ಪೊಲೀಸರನ್ನು ಸರ್ಕಾರ ಕರೆಯಿಸಿಕೊಂಡಿದೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್​ ಪಡೆಯ ಐದು ತುಕಡಿಗಳು ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇನ್ನಷ್ಟು ಕೇಂದ್ರೀಯ ಪಡೆಗಳನ್ನು ಕರೆಯಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net