ಬಾಂಗ್ಲಾದಲ್ಲಿ ಕರೊನಾ ರೋಗಿಗಳು ನಾಲ್ಕೇ ದಿನಕ್ಕೆ ಚೇತರಿಕೆ...! ಪವಾಡವನ್ನೇ ಮಾಡಿದೆ ಈ ಔಷಧ

vaccine
Published on

ನವದೆಹಲಿ: ಔಷಧ ಕ್ಷೇತ್ರದಲ್ಲಿ ಸದ್ಯ ನಡೆಯುತ್ತಿರುವ ಸಂಶೋಧನೆಗಳನ್ನು ಗಮನಿಸಿದರೆ, ಹಿಂದೆಂದೂ ಈ ಮಟ್ಟದಲ್ಲಿ ಚಟುವಟಿಕೆಗಳು ನಡೆದೇ ಇಲ್ಲವೇನೋ ಎಂಬಂತಿವೆ. ನೂರಾರು ಕಂಪನಿಗಳು ಕರೊನಾಗಾಗಿ ಹೊಸ ಲಸಿಕೆಯನ್ನು ಸಿದ್ಧಪಡಿಸುವಲ್ಲಿ ತೊಡಗಿವೆ. ಇನ್ನು, ಅಷ್ಟೇ ಸಂಖ್ಯೆಯ ಕಂಪನಿಗಳು ಕೂಡ ತಮ್ಮಲ್ಲಿರುವ ಲಸಿಕೆಯನ್ನೇ ಮಾರ್ಪಡಿಸಿ ಕರೊನಾ ವಿರುದ್ಧ ಯುದ್ಧಕ್ಕೆ ಸಜ್ಜುಗೊಳಿಸುತ್ತಿವೆ.

ಕರೊನಾಗೆಂದೇ ಲಸಿಕೆ ಇನ್ನೂ ಸಿದ್ಧವಾಗದ ಕಾರಣ, ಈಗಿರುವ ವೈರಸ್​ ನಿಗ್ರಹ ಲಸಿಕೆ ಭಾರತದ ಮಲೇರಿಯಾ ನಿವಾರಣಾ ಔಷಧ ಹೈಡ್ರೋಕ್ಸಿಕ್ಲೊರೋಕ್ವಿನ್​, ಅಮೆರಿಕದ ರೆಮ್​ಡೆಸಿವಿರ್​ ಮೊದಲಾದ ಔಷಧಗಳಿಗೆ ಭಾರಿ ಬೇಡಿಕೆ ಬಂದಿರೋದಂತೂ ಸತ್ಯ.

ಇದೀಗ ಇಂಥದ್ದೇ ವಿದ್ಯಮಾನ ಬಾಂಗ್ಲಾದೇಶದಲ್ಲೂ ಉಂಟಾಗಿದೆ. ಎರಡು ಔಷಧಗಳು ಕರೊನಾ ಸೋಂಕಿತರ ಮೇಲೆ ಪವಾಡವನ್ನೇ ಮಾಡಿವೆ ಎಂದು ಅಲ್ಲಿನ ವೈದ್ಯರು ಹೇಳುತ್ತಿದ್ದಾರೆ.

ಕರೊನಾ ರೋಗಿಗಳಿಗೆ ಢಾಕಾದಲ್ಲಿರುವ ಖಾಸಗಿ ಸಂಸ್ಥೆ ಬಾಂಗ್ಲಾದೇಶ ಮೆಡಿಕಲ್​ ಕಾಲೇಜ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಹೆಚ್ಚು ಬಳಕೆಯಲ್ಲಿರುವ ಎರಡು ಔಷಧಗಳನ್ನು ನೀಡಿದ್ದು, ಅವರು ನಾಲ್ಕೇ ದಿನದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಕಾಲೇಜಿನ ಔಷಧ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್​ ತಾರೆಖ್​ ಆಲಂ ಹೇಳಿದ್ದಾರೆ.

ಐವರ್​ಮೆಕ್ಟಿನ್​ ಲಸಿಕೆಯ ಒಂದು ಡೋಸ್​ ಹಾಗೂ ಡಾಕ್ಸಿಸೈಕ್ಲಿನ್​ ಆ್ಯಂಟಿಬಯೋಟಿಕ್​ ಲಸಿಕೆಯನ್ನು ಸೇರಿಸಿ ನೀಡಿದಾಗ ಉಂಟಾಗಿರುವ ಪರಿಣಾಮ ಅಚ್ಚರಿ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಒಟ್ಟಾರೆ 60 ಜನರ ಮೇಲೆ ಈ ಔಷಧ ಪ್ರಯೋಗಿಸಲಾಗಿತ್ತು. ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಜತೆಗೆ, ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಿದಾಗಲೂ ಅವರ ಕರೊನಾ ಸೋಂಕಿನ ಫಲಿತಾಂಶ ನೆಗೆಟಿವ್​ ಬಂದಿದೆ. ಜತೆಗೆ ಯಾವುದೇ ಅಡ್ಡಪರಿಣಾಮಗಳಿರಲಿಲ್ಲ ಎಂದು ಆಲಂ ಹೇಳಿದ್ದಾರೆ.

ಈ ಸಂಯುಕ್ತ ಔಷಧದ ಪರಿಣಾಮದ ಬಗ್ಗೆ ನಾವು ಶೇ.100 ವಿಶ್ವಾಸ ಹೊಂದಿದ್ದೇವೆ. ಈಗಾಗಲೇ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಈ ಔಷಧವನ್ನು ಶಿಫಾರಸು ಮಾಡಲು ವಿಸ್ತೃತ ವರದಿಯನ್ನು ತಯಾರಿಸುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಇದಲ್ಲದೇ, ಈ ಬಗ್ಗೆ ವಿಸ್ತೃತ ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಅಂತಾರಾಷ್ಟ್ರೀಯ ಜರ್ನಲ್​ಗಳಿಗೆ ಕಳುಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net