

ಬೀಜಿಂಗ್: ಕೋವಿಡ್ ಸಾಂಕ್ರಾಮಿಕತೆ ನಿಯಂತ್ರಣಕ್ಕೆ ಹೇರಿದ್ದ ಕಠಿಣ ನಿಯಮಗಳನ್ನು ಸಡಿಲಿಸಿದ ನಂತರ ಚೀನಾದ ಶಾಲೆಗಳು ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ದೇಶದಾದ್ಯಂತದ ಸಾಮಾಜಿಕ ಮಾಧ್ಯಮ ಬಳಕೆದಾರರು ಶುಕ್ರವಾರ ಹೇಳಿದ್ದಾರೆ.
ಕುಸಿದ ಆರ್ಥಿಕತೆಯ ಪುನಶ್ಚೇತನದ ಉದ್ದೇಶದಿಂದ ಕೆಲವು ದಿನಗಳ ಹಿಂದಿನಿಂದ ಶೂನ್ಯ ಕೋವಿಡ್ ನೀತಿಯನ್ನು ಸಡಿಲಿಸಲು ಆರಂಭಿಸಿದಾಗಿನಿಂದ ಸಾಂಕ್ರಾಮಿಕತೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಚೀನಿ ಅಧಿಕಾರಿಗಳು ಪರದಾಡುತ್ತಿದ್ದಾರೆ.
ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ಅಧಿಕೃತ ಅಂಕಿಸಂಖ್ಯೆ ತೋರಿಸಿದೆ. ಆದರೆ ಸರ್ಕಾರ ಬುಧವಾರ ಕಡ್ಡಾಯ ಪರೀಕ್ಷೆಯನ್ನು ಕೈಬಿಟ್ಟ ನಂತರ ಇಡೀ ದೇಶದ ಸ್ಥಿತಿಯನ್ನು ಅದು ಸೂಕ್ತವಾಗಿ ಬಿಂಬಿಸುವುದಿಲ್ಲ. ಶೂನ್ಯ ಕೋವಿಡ್ ನೀತಿಗಳಿಂದಾಗಿ ಲಕ್ಷಾಂತರ ಜನರು ಮನೆಯೊಳಗೇ ಇರಬೇಕಾಗಿ ಬಂದಿದ್ದು ಹತಾಶೆಗೊಂಡು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರು.