

ಬೆಂಗಳೂರು: 9 ಲಕ್ಷ ರೂ. ಚಿಕಿತ್ಸಾ ಶುಲ್ಕ ಪಾವತಿಸುವಂತೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಎರಡು ದಿನದವರೆಗೂ ಮೃತದೇಹ ನೀಡದೆ ಕುಟುಂಬಸ್ಥರನ್ನು ಸತಾಯಿಸಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಸೂಚನೆ ಬಳಿಕ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಿದ್ದಾರೆ.
ಜು.19ರಂದು ಕುಮಾರಸ್ವಾಮಿ ಲೇಔಟ್ನ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ (ಆ.7) ಮೃತಪಟ್ಟಿದ್ದರು. ಈ ವೇಳೆಗಾಗಲೇ ಚಿಕಿತ್ಸೆಯ ಶುಲ್ಕ 8.96 ಲಕ್ಷ ರೂ. ಆಗಿತ್ತು. ಅಷ್ಟು ಮೊತ್ತವನ್ನು ಕಟ್ಟುವವರೆಗೂ ಮೃತದೇಹ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದ ಆಸ್ಪತ್ರೆ ಅಧಿಕಾರಿಗಳು ಎರಡು ದಿನ ಸತಾಯಿಸಿದ್ದಾರೆ. ಬಳಿಕ ಮೃತನ ಸಹೋದರ ಶ್ರೀನಿವಾಸ್ ಆರೋಗ್ಯ ಸಚಿವ ಶ್ರೀರಾಮುಲು ಅವರ ಗಮನಕ್ಕೆ ತಂದಿದ್ದು, ಸಚಿವರು ಆಸ್ಪತ್ರೆಗೆ ಕರೆ ಮಾಡಿ ಕುಟುಂಬದವರಿಗೆ ಮೃತದೇಹ ಕೊಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ವ್ಯಕ್ತಿಯ ಸಹೋದರ ಶ್ರೀನಿವಾಸ್, ಜು.19ರಂದು ಅಣ್ಣನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೂ ಮೊದಲು ಕರೊನಾ ಪರೀಕ್ಷೆ ಮಾಡಿಸಲಾಗಿದ್ದು, ಪಾಸಿಟಿವ್ ಬಂದಿತ್ತು. ಅಲ್ಲದೆ, ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸಿದ್ದರು. ಶುಕ್ರವಾರ ಕರೆ ಮಾಡಿದ್ದ ಮಹಿಳಾ ವೈದ್ಯರೊಬ್ಬರು ಸಹೋದರ ಮೃತಪಟ್ಟಿದ್ದಾಗಿ ತಿಳಿಸಿದರು. ನಮ್ಮ ಅಳಿಯನನ್ನು ಆಸ್ಪತ್ರೆಗೆ ಕಳುಹಿಸಿದಾಗ, ಚಿಕಿತ್ಸಾ ವೆಚ್ಚ 9 ಲಕ್ಷ ರೂ. ಆಗಿದೆ. ಅಷ್ಟು ಹಣವನ್ನು ಪಾವತಿಸುವವರೆಗೂ ದೇಹ ಕೊಡುವುದಿಲ್ಲ ಎಂದು ಆಸ್ಪತ್ರೆಯವರು ಹೇಳಿದರು. ಭಾನುವಾರದವರೆಗೂ ಸತಾಯಿಸಿದ್ದು, ಕೊನೆಗೆ ಸಚಿವರ ಮಧ್ಯಪ್ರವೇಶದಿಂದ ದೇಹ ದೊರೆತಿದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ 10 ವರ್ಷ ಕೆಲಸ: ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ, ಸಾಗರ್ ಆಸ್ಪತ್ರೆಯಲ್ಲಿ 10 ವರ್ಷ ಕೆಲಸ ಮಾಡಿದ್ದರು. ಇದೇ ಆಸ್ಪತ್ರೆಯಲ್ಲಿ ನಿವೃತ್ತಿ ಹೊಂದಿದ್ದರು. ಕೆಲಸ ಮಾಡಿದ ಸಂಸ್ಥೆಯಾಗಿದ್ದರಿಂದ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಸಿಗಬಹುದು ಎಂಬ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ, ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಕುಂಟುಂಬದ ಐವರಿಗೆ ಕರೊನಾ ಪಾಸಿಟಿವ್ ಬಂದಿದೆ. ಮೂವರು ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದು, ಇನ್ನಿಬ್ಬರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಬೇರೊಂದು ಆಸ್ಪತ್ರೆಗೆ ತೆರಳಿದ್ದಾರೆ. ಇವರಿಗೆ ದಿನದ ಚಿಕಿತ್ಸೆಗೆ ತಲಾ 1.26 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಸಚಿವ ಡಾ.ಕೆ. ಸುಧಾಕರ್ ಬೇಸರ: ಹಣ ಕಟ್ಟುವವರೆಗೂ ಮೃತದೇಹ ಕೊಡುವುದಿಲ್ಲ ಎನ್ನುವುದು ಖಂಡನೀಯ. ಹಣ ಗಳಿಸುವುದೇ ಆಸ್ಪತ್ರೆಗಳಿಗೆ ಮಾನದಂಡವಾಗಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಬೇಸರ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಮುಖ್ಯಸ್ಥರ ಜತೆ ಮಾತನಾಡಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಟ್ವೀಟ್ ಮಾಡಿದ್ದಾರೆ.