ಕೋವಿಡ್ 19: ಖಾಸಗಿ ಚಿಕಿತ್ಸೆಗೆ ರೇಟ್ ಫಿಕ್ಸ್

Coronavirus
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಸುಲಭವಾಗಿ ಚಿಕಿತ್ಸೆ ದೊರಕಿಸಿಕೊಡುವ ಯತ್ನವಾಗಿ ಇನ್ಮುಂದೆ ಖಾಸಗಿ ಆಸ್ಪತ್ರೆಗಳೂ ಮಹಾಮಾರಿ ಚಿಕಿತ್ಸೆಗೆ ಮುಕ್ತವಾಗಲಿವೆ. ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿರುವ ರೋಗಿ ಹಾಗೂ ಸಾಮಾನ್ಯ ರೋಗಿ ಎಂದು ಎರಡು ಮಾದರಿಯಲ್ಲಿ ಚಿಕಿತ್ಸೆಗೆ ದರ ಪಟ್ಟಿ ಸಿದ್ಧಪಡಿಸಿ ಮಂಗಳವಾರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಖಾಸಗಿ ಆಸ್ಪತ್ರೆಗಳು ಕರೊನಾ ಸೋಂಕಿತರಿಗೆ ಮೀಸಲಿಡುವ ಒಟ್ಟು ಹಾಸಿಗೆಗಳಲ್ಲಿ ಶೇ.50ರಷ್ಟು ಹೈ ಡಿಪೆಂಡೆನ್ಸಿ ಯುನಿಟ್ (ಎಚ್​ಡಿಯು), ಐಸಿಯು ಹಾಗೂ ವೆಂಟಿಲೇಟರ್ ಸೌಲಭ್ಯ ಒಳಗೊಂಡ ಹಾಸಿಗೆಗಳನ್ನು ಸರ್ಕಾರಿ ಆಸ್ಪತ್ರೆಗಳು ಶಿಫಾರಸು ಮಾಡುವ ರೋಗಿಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕು. ಉಳಿದ ಶೇ.50 ಹಾಸಿಗೆಗಳಿಗೆ ಸಂಬಂಧಿತ ಆಸ್ಪತ್ರೆಗಳೇ ನೇರವಾಗಿ ರೋಗಿಗಳನ್ನು ದಾಖಲಿಸಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೆಲ ದಿನಗಳ ಹಿಂದೆ ಎಲ್ಲ ಖಾಸಗಿ ಆಸ್ಪತ್ರೆಗಳು ಕರೊನಾ ಚಿಕಿತ್ಸೆಗೆ ತಗುಲುವ ವೆಚ್ಚದ ಕುರಿತು ಸರ್ಕಾರಕ್ಕೆ ದರಪಟ್ಟಿ ಸಲ್ಲಿಸಿದ್ದವು. ಕರ್ನಾಟಕ ಆರೋಗ್ಯ ಕಾಳಜಿ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಯನ್ನು ಒಳಗೊಂಡಂತೆ 8 ಮಂದಿ ಸದಸ್ಯರ ದರ ನಿಗದಿ ಸಮಿತಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬದ ರೋಗಿಗಳಿಗೆ ಕ್ರಮವಾಗಿ ಸಾಮಾನ್ಯ ವಾರ್ಡ್​ಗೆ 5,200, ಆಮ್ಲಜನಕ ಸೌಲಭ್ಯವುಳ್ಳ ವಾರ್ಡ್​ಗೆ 7,000, ತೀವ್ರ ನಿಗಾ ಘಟಕಕ್ಕೆ 8,500, ವೆಂಟಿಲೇಟರ್ ಸಹಿತ ಐಸಿಯುಗೆ 10,000 ಶುಲ್ಕ ನಿಗದಿಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​? ಉಚಿತ ಚಿಕಿತ್ಸೆಗೂ ಅವಕಾಶ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ಶಿಫಾರಸು ಮಾಡುವ ರೋಗಿಗಳಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್​ದಾರರು ಮಾತ್ರವಲ್ಲದೆ ಬಿಪಿಎಲ್, ಎಪಿಎಲ್ ಕಾರ್ಡ್​ದಾರರು, ವಲಸೆ ಕಾರ್ವಿುಕರು ಹಾಗೂ ಅಂತರ ರಾಜ್ಯಗಳಿಂದ ವಾಪಸಾಗಿರುವವರಿಗೆ ಸೋಂಕು ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಅವರೆಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಪಾವತಿಸಲಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಮಾಹಿತಿ ನೀಡಿದ್ದಾರೆ.

ಷರತ್ತುಗಳೇನು? ಶೇ.50 ಬೆಡ್​ಗಳನ್ನು ಸರ್ಕಾರ ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡಬೇಕು ವಿಮಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿರುವವರಿಗೆ ಈ ದರ ಅನ್ವಯಿಸುವುದಿಲ್ಲ ಆರೋಗ್ಯ ಇಲಾಖೆ, ಬಿಬಿಎಂಪಿ ಅಧಿಕಾರಿಗಳು, ಡಿಸಿಗಳು ರೋಗಿಗಳು

ಚಿಕಿತ್ಸೆಗೆ ಶಿಫಾರಸು

  • ಕರೊನಾ ಸೋಂಕಿತರಿಗೆ ಬೇರೆ ಕಾಯಿಲೆಗಳ ಚಿಕಿತ್ಸೆಗೆ ಹೆಚ್ಚುವರಿ ದರ ಅನ್ವಯವಾಗುತ್ತದೆ
  • ಚಿಕಿತ್ಸೆ ಹಾಗೂ ಡಿಸ್ಚಾರ್ಜ್ ಪ್ರಕ್ರಿಯೆ ಸರ್ಕಾರದ ಪ್ರೋಟೋಕಾಲ್ ಅನ್ವಯ ನಡೆಯಬೇಕು
  • ಬಿಪಿಎಲ್, ಎಪಿಎಲ್, ವಲಸೆ ಕಾರ್ವಿುಕರು ಮತ್ತು ಅಂತಾರಾಜ್ಯದ ರೋಗಿಗಳಿಗೂ ಚಿಕಿತ್ಸೆ
  • ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ

ಖಾಸಗಿ ಚಿಕಿತ್ಸೆಗೆ ವಿರೋಧ: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆಗೆ ಅವಕಾಶ ನೀಡಿರುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಚಿಕಿತ್ಸೆಗೆ ಬಳಸಿಕೊಳ್ಳಲಾಗಿದೆ. ಇದರಿಂದ ಕರೊನಾ ಬಿಟ್ಟು ಉಳಿದ ರೋಗಗಳಿಗೆ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಾಗಿತ್ತು. ಆದರೆ, ಈಗ ಖಾಸಗಿ ಆಸ್ಪತ್ರೆಗಳಲ್ಲೂ ಕರೊನಾ ಚಿಕಿತ್ಸೆಗೆ ಅವಕಾಶ ನೀಡಿರುವುದರಿಂದ ಇತರ ರೋಗಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ಹೆದರುವಂತಾಗಿದೆ. ನಿಗದಿಪಡಿಸಿರುವ ದರ ಕೂಡ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರವೇ ಇನ್ನಷ್ಟು ಹಾಸಿಗೆಗಳನ್ನು ಸಿದ್ಧಪಡಿಸಿಕೊಂಡು ಚಿಕಿತ್ಸೆ ನೀಡಿದರೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಲಾಕ್​ಡೌನ್ ಅನುಮಾನ: ರಾಜ್ಯದಲ್ಲಿ ಕರೊನಾ ಹೆಚ್ಚುತ್ತಿದ್ದರೂ ಮತ್ತೆ ಲಾಕ್​ಡೌನ್ ಜಾರಿಗೊಳಿಸದೆ ಸೋಂಕು ನಿಯಂತ್ರಣದ ಕಡೆ ಗಮನ ಹರಿಸಲು ಸರ್ಕಾರ ಉದ್ದೇಶಿಸಿದೆ. ಕೇಂದ್ರದಿಂದ ಸೂಚನೆ ಬಾರದ ಹೊರತು ಮತ್ತೆ ಲಾಕ್​ಡೌನ್ ಜಾರಿಗೊಳಿಸದಿರಲು ಸರ್ಕಾರ ನಿರ್ಧರಿಸಿ ರುವುದಾಗಿ ಉನ್ನತ ಮೂಲಗಳು ಖಚಿತಪಡಿಸಿವೆ. ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ಇನ್ನಷ್ಟು ಚುರುಕು ಮುಟ್ಟಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net