ನಾಲ್ಕು ಹಂತದ ದಿಗ್ಬಂಧನಕ್ಕೆ 60 ದಿನ | ಎಂಟು ಸಿಟಿಗಳ ಚಿತ್ರಣ

Corona Test
Published on
ಕರೊನಾ ಪಸರಿಸುವಿಕೆ ತಡೆಯಲು ದೇಶಾದ್ಯಂತ ಲಾಕ್​ಡೌನ್ ಜಾರಿಯಾಗಿ 60 ದಿನಗಳು ಕಳೆದಿದೆ. ನಾಲ್ಕು ಹಂತಗಳಲ್ಲಿ ವಿಸ್ತರಣೆಯಾದ ದಿಗ್ಬಂಧನದ ನಿರ್ಬಂಧಗಳ ಸ್ವರೂಪ ಕೂಡ ಸಾಕಷ್ಟು ಬದಲಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 1.30 ಲಕ್ಷಕ್ಕಿಂತ ಅಧಿಕವಾಗಿರುವ ವೇಳೆಯಲ್ಲೆ ಹಲವು ನಗರಗಳಲ್ಲಿ ಮತ್ತೆ ಟ್ರಾಫಿಕ್ ಜಾಮ್ ಉಂಟಾಗುವಷ್ಟರ ಮಟ್ಟಿಗೆ ಜನರ ಓಡಾಟ ಶುರುವಾಗಿದೆ. ಲಾಕ್​ಡೌನ್​ನ 60 ದಿನಗಳ ಬಳಿಕ ದೇಶದ ವಿವಿಧ ನಗರಗಳ ಸಂಪೂರ್ಣ ಚಿತ್ರಣ ಇಲ್ಲಿದೆ.

ಭಾರತದಲ್ಲಿ ಪ್ರತಿದಿನ ವರದಿಯಾಗುವ ಸೋಂಕಿತರ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.30 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 125 ಸಾವು ವರದಿಯಾಗಿದ್ದು, ಮೃತರ ಸಂಖ್ಯೆ 3,800ಕ್ಕಿಂತ ಹೆಚ್ಚಾಗಿದೆ. ದೇಶದಲ್ಲಿ ಸದ್ಯ 72 ಸಾವಿರ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 47 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳಿದ್ದು, ತಮಿಳುನಾಡಿನಲ್ಲಿ 15 ಸಾವಿರ, ಗುಜರಾತ್​ನಲ್ಲಿ 13 ಸಾವಿರ ಹಾಗೂ ದೆಹಲಿಯಲ್ಲಿ 12 ಸಾವಿರ ಪ್ರಕರಣಗಳು ವರದಿಯಾಗಿವೆ. ಕಳೆದ 24 ತಾಸಿನಲ್ಲಿ 972 ರೋಗಿಗಳು ಗುಣಮುಖರಾಗುವುದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 54 ಸಾವಿರಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಅಂದರೆ 13 ಸಾವಿರಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದಾರೆ. ತಮಿಳುನಾಡಿನಲ್ಲಿ 7 ಸಾವಿರ, ದೆಹಲಿಯಲ್ಲಿ 6 ಸಾವಿರ, ಗುಜರಾತ್​ನಲ್ಲಿ 5 ಸಾವಿರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ತಲಾ 3 ಸಾವಿರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ಈವರೆಗೆ ಸಾವಿರಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ.

ಸಿಕ್ಕಿಂನಲ್ಲಿ ಮೊದಲ ಪ್ರಕರಣ ಭಾರತದಲ್ಲಿ ಕರೊನಾ ಮುಕ್ತವೆನಿಸಿಕೊಂಡಿದ್ದ ಏಕೈಕ ರಾಜ್ಯ ಸಿಕ್ಕಿಂನಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಗಿದೆ. ಇತ್ತೀಚೆಗೆ ದೆಹಲಿ ಪ್ರವಾಸ ಮಾಡಿ ಬಂದಿದ್ದ ದಕ್ಷಿಣ ಸಿಕ್ಕಿಂನ ನಿವಾಸಿಯಲ್ಲಿ ಸೋಂಕು ದೃಢವಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಜ್ಯದಲ್ಲಿ ಕರೊನಾ ಪರೀಕ್ಷಾ ಕೇಂದ್ರವಿಲ್ಲದ ಕಾರಣ ಪಕ್ಕದ ಪಶ್ಚಿಮ ಬಂಗಾಳದ ಪರೀಕ್ಷಾ ಕೇಂದ್ರಕ್ಕೆ ಗಂಟಲಿನ ದ್ರವವನ್ನು ಕಳುಹಿಸಿಕೊಡಲಾಗಿತ್ತು. ಚೀನಾ, ಭೂತಾನ್, ಪಶ್ಚಿಮ ಬಂಗಾಳ, ನೇಪಾಳದ ಜತೆ ಗಡಿ ಹಂಚಿಕೊಂಡಿರುವ ಸಿಕ್ಕಿಂ ಎಲ್ಲ ಗಡಿಗಳನ್ನು ಮುಚ್ಚಿ ಕರೊನಾ ಬಾರದಂತೆ ಕಾಪಾಡಿಕೊಂಡಿತ್ತು.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಂದಿನಂತೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಹುತೇಕ ವಲಯಗಳು ಯಥಾಸ್ಥಿತಿಯಲ್ಲಿ ಕೆಲಸ ಪುನರಾರಂಭಿಸಿವೆ. ಬಿಎಂಟಿಸಿ ಬಸ್​ಗಳು ಮುಂಜಾಗ್ರತಾ ಕ್ರಮಗಳ ಅಳವಡಿಕೆ ಮೇಲೆ ಕಾರ್ಯನಿರ್ವಹಿಸುತ್ತಿವೆ. ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರವು ಆರಂಭವಾಗಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ ಹಾಗೂ ಮಧ್ಯಪ್ರದೇಶದಿಂದ ಬೆಂಗಳೂರು ಅಥವಾ ರಾಜ್ಯದ ಇನ್ಯಾವುದೇ ಸ್ಥಳಗಳಿಗೆ ಪ್ರಯಾಣಿಸುವರನ್ನು ಒಂದು ವಾರ ಕಾಲ ಕ್ವಾರಂಟೈನ್ ಹಾಗೂ ನಂತರದ ಒಂದು ವಾರ ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತದೆ. ಕರ್ನಾಟಕದಲ್ಲಿ ಕಳೆದ ಗುರುವಾರ ಒಂದೇ ದಿನ 11,449 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಏಪ್ರಿಲ್ 22ಕ್ಕೆ ಹೋಲಿಸಿದರೆ ಈ ಸಾಮರ್ಥ್ಯ ಶೇಕಡಾ 250 ಹೆಚ್ಚಳವಾಗಿದೆ.

ಹೈದರಾಬಾದ್: ವಾಹನ ಚಾಲಕರು ಹಾಗೂ ಇತರ ಕ್ಷೇತ್ರಗಳ ಕೆಲಸಗಾರರಿಂದ ಹರಡಿದ ಸೋಂಕಿನ ಪ್ರಾಥಮಿಕ ಮತ್ತು ನಂತರದ ಸಂಪರ್ಕಗಳನ್ನು ಹುಡುಕುವುದೇ ಹೈದರಾಬಾದ್​ನಲ್ಲಿ ದೊಡ್ಡ ಸವಾಲಾಗಿದೆ. ಹೈದರಾಬಾದ್​ನಲ್ಲಿರುವ ಬಹುತೇಕ ಪ್ರಕರಣಗಳ ಮೂಲ ಕೆಲ ಕುಟುಂಬಗಳಾಗಿದ್ದು, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ವಿದೇಶಗಳಿಂದ ತೆಲಂಗಾಣಕ್ಕೆ ಮರಳಿದವರಿಗೆ ಪಾವತಿ ಕ್ವಾರಂಟೈನ್ ಬದಲಾಗಿ ಸರ್ಕಾರದಿಂದ ಉಚಿತ ಕ್ವಾರಂಟೈನ್ ಸೌಲಭ್ಯ ಒದಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: #TTDForSale ಟ್ವಿಟರ್​ನಲ್ಲಿ ಟ್ರೆಂಡಿಂಗ್​: ಅನುಪಯುಕ್ತ ಆಸ್ತಿ ಮಾರಾಟಕ್ಕೆ ಟಿಟಿಡಿ ತೀರ್ಮಾನ ಮುಂಬೈ: ದೇಶದಲ್ಲಿ ಕರೊನಾದಿಂದ ಅತಿ ಹೆಚ್ಚು ಬಾಧಿತವಾಗಿರುವ ನಗರ ಮುಂಬೈ. ಇಲ್ಲಿ ಮೃತರ ಸಂಖ್ಯೆ 900ಕ್ಕಿಂತ ಹೆಚ್ಚಾಗಿದ್ದು, ಸತತ 6 ದಿನಗಳಿಂದ ನಿತ್ಯ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಆಂಬುಲೆನ್ಸ್​ಗಳ ಕೊರತೆ ಹಿನ್ನೆಲೆ ಆಪ್ ಕ್ಯಾಬ್​ಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಸೋಂಕಿತರನ್ನು ತ್ವರಿತವಾಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಮುಂಬೈ ನಗರದಲ್ಲೇ ಸೋಂಕಿತರ ಪ್ರಮಾಣ 25 ಸಾವಿರ ಗಡಿ ದಾಟಿದೆ. ರಾಜ್ಯ ಸರ್ಕಾರವು ಅನೇಕ ನಿರ್ಬಂಧಗಳನ್ನು ಸಡಿಲಿಸಿದೆ. ಮನೆಗೆ ಮದ್ಯ ಪೂರೈಸಲಾಗುತ್ತಿದೆ. ಆದರೆ ಕಂಟೇನ್ಮೆಂಟ್ ವಲಯಗಳಲ್ಲಿ ಹಾಗೂ ಕರೊನಾ ಸೋಂಕಿತರು ಹೆಚ್ಚಿರುವ ಪ್ರದೇಶಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದಲ್ಲಿ ಮರಣ ಪ್ರಮಾಣ ಇಳಿಕೆ ಕರೊನಾದ ಆರ್ಭಟಕ್ಕೆ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಕರೊನಾದಿಂದಾಗಿ ಮೃತಪಡುವವರ ಪ್ರಮಾಣ ಶೇಕಡಾ 4.76 ಇಂದ ಶೇ.3.49ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ದಾಖಲೆ ತಿಳಿಸಿದೆ. ಏಪ್ರಿಲ್ 22ರಂದು ಶೇ.4.76 ಇದ್ದ ಮರಣ ಪ್ರಮಾಣ ಈಗ ಶೇ.3.49ಕ್ಕಿಳಿದಿದೆ. ಆದರೆ, ಸಾವಿನ ಸಂಖ್ಯೆ 269 ರಿಂದ 1,459ಕ್ಕೆ ಏರಿಕೆಯಾಗಿದೆ. ಜತೆಗೆ ಕಳೆದ ಏಪ್ರಿಲ್ 22ರವರೆಗೆ ಮಹಾರಾಷ್ಟ್ರದಲ್ಲಿ 5,469 ಪ್ರಕರಣಗಳು ವರದಿಯಾಗಿದ್ದು, ಸದ್ಯ ಈ ಸಂಖ್ಯೆ 41 ಸಾವಿರಕ್ಕಿಂತಲೂ ಅಧಿಕವಾಗಿದೆ. ಈವರೆಗೆ 3.22 ಲಕ್ಷಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ.

ಅಹಮದಾಬಾದ್: ನಗರದಲ್ಲಿನ ಕ್ಯಾನ್ಸರ್ ಇನ್​ಸ್ಟಿಟ್ಯೂಟ್ ರಿಸರ್ಚ್​ನಲ್ಲಿನ ಸಿಬ್ಬಂದಿಯಲ್ಲಿ ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ. ಇಲ್ಲಿ 600ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದು, ಅವರಿಂದ ಸೋಂಕು ಪಸರಿಸಿದೆ. 9 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಹಾಗೂ 645 ಸಾವುಗಳು ಇಲ್ಲಿಂದ ವರದಿಯಾಗಿವೆ. ಮುಂಬೈ ಮತ್ತು ದೆಹಲಿ ಹೊರತುಪಡಿಸಿದರೆ ಕರೊನಾ ತೀವ್ರತೆಯಲ್ಲಿ ಅಹಮದಾಬಾದ್ ನಂತರದ ಸ್ಥಾನದಲ್ಲಿದೆ. ನಗರದಲ್ಲಿನ ಕರೊನಾ ರೋಗಿಗಳ ಗುಣಮುಖ ಪ್ರಮಾಣ ಶೇ.19ರಿಂದ ಈಗ ಶೇ. 39ಕ್ಕೆ ಏರಿಕೆಯಾಗಿದೆ. ಲಾಕ್​ಡೌನ್ ನಿಯಮ ಪಾಲನೆ ಅಷ್ಟಕ್ಕಷ್ಟೆ.

ಚೆನ್ನೈ: ಚೆನ್ನೈ ನಗರ ಹಾಗೂ ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಟೋಗಳ ಸಂಚಾರಕ್ಕೆ ತಮಿಳುನಾಡಿನಲ್ಲಿ ಅನುಮತಿ ನೀಡಲಾಗಿದೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿನ ಬ್ಯೂಟಿ ಪಾರ್ಲರ್​ಗಳಿಗೆ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಚೆನ್ನೈನಲ್ಲಿ 500ಕ್ಕೂ ಅಧಿಕ ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಕೋಲ್ಕತ: ಕೋಲ್ಕತದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಹಲವು ಕಡೆಗಳಲ್ಲಿ ಅಂಗಡಿಗಳು ಬಾಗಿಲು ತೆರೆದಿದ್ದು, ಚಟುವಟಿಕೆಗಳು ಯಥಾಸ್ಥಿತಿಗೆ ಮರಳುತ್ತಿವೆ. ಅಂಫಾನ್ ಆರ್ಭಟ ಮುಗಿದಿರುವ ಹಿನ್ನೆಲೆ ಸಾರಿಗೆ ಸೇರಿದಂತೆ ಕೆಲ ವಲಯಗಳು ಪುನರಾರಂಭವಾಗುವ ನಿರೀಕ್ಷೆ ಇದೆ. ಸೋಮವಾರ 93 ವಿಮಾನಗಳು ಇಲ್ಲಿಂದ ಹಾರಾಟ ನಡೆಸಲಿವೆ. ಆದಾಗ್ಯೂ ಇಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 170ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಅಂಫಾನ್ ಚಂಡಮಾರುತ ಕಾರಣ ಜನರ ಸಂಕಷ್ಟ ಹೆಚ್ಚಿದೆ.

ಲಖನೌ: ದೇಶದ ವಿವಿಧ ಭಾಗಗಳಿಂದ ನಗರಕ್ಕೆ ಬರುವ ಎಲ್ಲರನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಸೋಮವಾರದಿಂದ ಆರಂಭವಾಗುವ ದೇಶಿಯ ವಿಮಾನಯಾನ ಸೇವೆ ಹಿನ್ನೆಲೆ ನಗರದಲ್ಲಿ ಸಿಲುಕಿರುವ ಸುಮಾರು 1500ಕ್ಕೂ ಅಧಿಕ ಜನರು 16 ವಿಮಾನಗಳ ಮೂಲಕ ವಿವಿಧೆಡೆಗೆ ಸಂಚರಿಸಲಿದ್ದು, ಅವರೆಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಲಾಗುತ್ತದೆ. ಮಾರುಕಟ್ಟೆಗಳಿಗೆ ಸಮ-ಬೆಸ ದಿನಾಂಕದ ಆಧಾರದ ಮೇಲೆ ಚಟುವಟಿಕೆ ನಡೆಸಲು ಅನುಮತಿಸಲಾಗಿದ್ದು, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯ ಸೌಲಭ್ಯ ಹೊರತುಪಡಿಸಿ ಎಲ್ಲ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

ದೆಹಲಿ: ಲಾಕ್​ಡೌನ್​ನಿಂದಾಗಿ ಕಳೆದೆರಡು ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಸುಧಾರಿಸಿದ್ದ ದೆಹಲಿ ಹವಾಮಾನ, ಸಂಚಾರ ನಿರ್ಬಂಧ ನಿಯಮ ಸಡಿಲಿಕೆಯಿಂದಾಗಿ ಮತ್ತೆ ಹದಗೆಡುತ್ತಿದ್ದು, ಶನಿವಾರ ಬೆಳಗ್ಗೆ ವಾಯು ಗುಣಮಟ್ಟ ಸೂಚ್ಯಂಕ 162ರಷ್ಟು ದಾಖಲಾಗಿದೆ. ಹೊಸದಾಗಿ 9 ಕಂಟೇನ್ಮೆಮೆಂಟ್ ವಲಯಗಳನ್ನು ಗುರುತಿಸಲಾಗಿದ್ದು, ಒಟ್ಟು ಸಂಖ್ಯೆ 86ಕ್ಕೆ ಏರಿಕೆಯಾಗಿದೆೆ. ಶುಕ್ರವಾರ 66 ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಈ ಹಿಂದೆ 172 ಮದ್ಯದಂಗಡಿಗಳಿಗೆ ಅನುಮತಿ ನೀಡಲಾಗಿತ್ತು. ಶನಿವಾರ 591 ಹೊಸ ಪ್ರಕರಣಗಳೊಂದಿಗೆ ದೆಹಲಿಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 12,910ಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net