

ನವದೆಹಲಿ: ದೇಶದ ಕೆಲವು ಭಾಗದಲ್ಲಿ ಕರೊನಾ ಸೋಂಕು ಯಾವುದೇ ಲಕ್ಷಣವಿಲ್ಲದೆ ಕಾಣಿಸಿಕೊಳ್ಳುತ್ತಿದೆ. ಸೋಂಕಿತನಿಗೆ ಕಾಯಿಲೆಯ ಯಾವುದೇ ಲಕ್ಷಣವೂ ಗೋಚರಿಸುತ್ತಿಲ್ಲ. ಆದರೂ ವರದಿ ಪಾಸಿಟಿವ್ ಎಂದೇ ಬರುತ್ತಿದೆ.
ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ 75 ಜಿಲ್ಲೆಗಳಲ್ಲಿ ಶೀಘ್ರವೇ ಲಕ್ಷಣ ರಹಿತ ಕರೊನಾ ಸೋಂಕಿನ ಬಗ್ಗೆ ಹೆಚ್ಚಿನ ತಪಾಸಣೆ ಕೈಗೊಳ್ಳಲಿದೆ. ಆಯಾ ಪ್ರದೇಶಗಳ ಎಲ್ಲರಿಗೂ ಟೆಸ್ಟ್ ಮಾಡುವ ಮೂಲಕ, ಭಾರತದಲ್ಲಿ ಕರೊನಾ ಸಮುದಾಯ ಪ್ರಸರಣ ಆಗುತ್ತಿದೆಯಾ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಪಾಸಣೆಯನ್ನು ಶುರು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಮೂರನೇ ಹಂತದ ಲಾಕ್ಡೌನ್ ಮಧ್ಯೆಯೂ ಕರೊನಾ ವೈರಸ್ ಪ್ರಸರಣದ ಪ್ರಮಾಣ ಹೆಚ್ಚುತ್ತಲೇ ಇದೆ. ಇಂದು ಬೆಳಗ್ಗೆ 9ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ವರದಿ ಪ್ರಕಾರ, ಕಳೆದ 24 ಗಂಟೆಯಲ್ಲಿ 3,320 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 59,662ಕ್ಕೆ ಏರಿದೆ.
ಹಾಗೇ ಕಳೆದ 24ಗಂಟೆಯಲ್ಲಿ 95ಮಂದಿ ಕರೊನಾ ವೈರಸ್ನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,981ಆಗಿದೆ. 17,847 ಮಂದಿ ಸೋಂಕಿನಿಂದ ಪಾರಾಗಿ ಡಿಸ್ಚಾರ್ಜ್ ಆಗಿದ್ದು, ಸಕ್ರಿಯ ಕರೊನಾ ಪ್ರಕರಣಗಳು 39,384 ಇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಭಾರತದಲ್ಲಿ ಹೆಚ್ಚಿನ ಕರೊನಾ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. 19063 ಮಂದಿ ಸೋಂಕಿತರು ಇದ್ದು, 731 ಜನ ಮೃತಪಟ್ಟಿದ್ದಾರೆ. ಇಲ್ಲಿನ ಶೇ.90ರಷ್ಟು ಕೇಸ್ಗಳು ವರದಿಯಾಗಿದ್ದು ಮುಂಬೈ ಮತ್ತು ಪುಣೆಯಿಂದ.
ಹಾಗೇ ಎರಡನೇ ಸ್ಥಾನದಲ್ಲಿರುವ ಗುಜರಾತ್ನಲ್ಲಿ 24 ಗಂಟೆಯಲ್ಲಿ 300 ಹೊಸ ಕೇಸ್ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 7402ರಷ್ಟಾಗಿದೆ. 449 ಜನ ಸತ್ತಿದ್ದಾರೆ.
ದೆಹಲಿಯಲ್ಲಿ 6318 ಕರೊನಾ ಸೋಂಕಿತರು ಇದ್ದಾರೆ. 40 ಸಾವಾಗಿದೆ. ನಂತರ ಸ್ಥಾನದಲ್ಲಿ ತಮಿಳುನಾಡು (6,009 ಸೋಂಕಿತರು), ರಾಜಸ್ಥಾನ (3,579)ಗಳಿವೆ. (ಏಜೆನ್ಸೀಸ್)