ಶೂನ್ಯ ದಳ, ಗೆದ್ದ ಕೈ-ಕಮಲ: ಮೇಲ್ಮನೆ ಫಲಿತಾಂಶ; ಹೊರಟ್ಟಿ, ನಿರಾಣಿ, ಹುಕ್ಕೇರಿ ಜಯಭೇರಿ..

Vidhana Soudha
Published on

ಬೆಂಗಳೂರು: ಶಿಕ್ಷಕರು ಮತ್ತು ಪದವೀಧರರನ್ನು ಪ್ರತಿನಿಧಿಸುವ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ 2 ಹಾಗೂ ಪ್ರತಿಪಕ್ಷ ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ. ಪತ್ರಿಕೆ ಮುದ್ರಣಕ್ಕೆ ಹೋಗುವ ತನಕ ಬಂದ ಫಲಿತಾಂಶದಂತೆ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಪ್ರಕಾಶ್ ಹುಕ್ಕೇರಿ ಜಯ ಸಾಧಿಸಿದ್ದರು. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಮಧು ಮಾದೇಗೌಡ ಮುನ್ನಡೆ ಸಾಧಿಸಿದ್ದು, ಮತ ಎಣಿಕೆ ಪ್ರಗತಿಯಲ್ಲಿತ್ತು.

ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನಗಳನ್ನು ಪಡೆದು ಸಮಬಲ ಸಾಧಿಸಿದ್ದವು. ಈಗಲೂ ಅದೇ ಪರಿಸ್ಥಿತಿ ಇರುವುದು ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಜೆಡಿಎಸ್​ನ ಸ್ಥಾನಗಳು ಕುಸಿಯುತ್ತಿರುವುದು ಆ ಪಕ್ಷದ ಮುಖಂಡರ ತಲೆ ಬಿಸಿ ಮಾಡಿದೆ. ಈಗ ಚುನಾವಣೆ ನಡೆದ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಲ್ಲಿ ಹಿಂದೆ ತಲಾ ಎರಡರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿದ್ದರು.

ಬಸವರಾಜ ಹೊರಟ್ಟಿ ಪಕ್ಷಾಂತರ ಮಾಡಿ ಬಿಜೆಪಿಗೆ ಹೋಗಿ ಆ ಪಕ್ಷಕ್ಕೆ ಒಂದು ಸ್ಥಾನ ತಂದುಕೊಟ್ಟಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶ್ರೀಕಂಠೇಗೌಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದು ಜೆಡಿಎಸ್ ಪಾಲಿಗೆ ತೊಡಕಾಗಿದೆ. ಆದ್ದರಿಂದಲೇ ಬಿಜೆಪಿಗೆ ಸರಿಸಮಾನವಾಗಿ ಕಾಂಗ್ರೆಸ್ ಸ್ಥಾನಗಳಿಸುವತ್ತ ಮುನ್ನಡೆದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಪರಿಷತ್​ನಲ್ಲಿ ಬಿಜೆಪಿ ಅಗ್ರ: ಆಡಳಿತಾರೂಢ ಬಿಜೆಪಿ 75 ಸದಸ್ಯ ಬಲದ ವಿಧಾನ ಪರಿಷತ್​ನಲ್ಲಿ ನಿಚ್ಚಳ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶವು ಪಕ್ಷಕ್ಕೆ ಅಗ್ರಸ್ಥಾನದ ಪಟ್ಟ ನೀಡಿದೆ. ಸದ್ಯದ ಲೆಕ್ಕಾಚಾರ ಪ್ರಕಾರ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸೇರಿ ಸದಸ್ಯ ಬಲ 39ಕ್ಕೆ ಏರಿಕೆಯಾಗಿದೆ. ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಸೇರಿದರೆ 40 ಆಗಲಿದೆ. ಬಹುಮತಕ್ಕೆ 38 ಸದಸ್ಯ ಬಲ ಸಾಕು. ಇದರಿಂದಾಗಿ ಮಸೂದೆಗಳು, ನೀತಿ-ನಿರ್ಧಾರಗಳಿಗೆ ಅಂಗೀಕಾರದ ಮಾರ್ಗ ಸುಗಮವಾಗಿದೆ.

ದಕ್ಷಿಣದಲ್ಲಿ ಜಿದ್ದಾಜಿದ್ದಿ: ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ತೀವ್ರ ಜಿದ್ದಾಜಿದ್ದಿ ನಡೆದಿದೆ. ಬಿಜೆಪಿಯಿಂದ ಮೈ.ವಿ. ರವಿಶಂಕರ್, ಕಾಂಗ್ರೆಸ್​ನ ಮಧು ಮಾದೇಗೌಡ ಮತ್ತು ಜೆಡಿಎಸ್​ನ ಎಚ್.ಕೆ. ರಾಮು ಸ್ಪರ್ಧಿಸಿದ್ದು, ಮಧು ಮಾದೇಗೌಡ ಬಿಜೆಪಿ ಅಭ್ಯರ್ಥಿಗಿಂತ 3958 ಮತಗಳಿಂದ ಮುನ್ನಡೆಯಲ್ಲಿದ್ದರು.

ಗೆದ್ದು ಬೀಗಿದ ಕಾಂಗ್ರೆಸ್: ಈ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಮುಂದಿನ ಚುನಾವಣೆಗೆ ಒಂದು ರೀತಿಯಲ್ಲಿ ಟಾನಿಕ್ ಎಂದೇ ಪರಿಗಣಿಸಲಾಗಿದೆ. ಒಂದು ಸ್ಥಾನದಲ್ಲಿ ಗೆದ್ದು, ಇನ್ನೊಂದರಲ್ಲಿ ಸಾಕಷ್ಟು ಮುನ್ನಡೆ ಇರುವುದರಿಂದ ಮುಂದಿನ ಚುನಾವಣೆಯ ಸಿದ್ಧತೆಗೆ ಉತ್ಸಾಹ ಬಂದಂತಾಗಿದೆ.

ಬಿಜೆಪಿ ಕೋಟೆ ಹಸ್ತ ವಶ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರುಣ ಶಹಾಪೂರ ಸೋಲು ಬಿಜೆಪಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಬಿಜೆಪಿಯ ಅಂತಃಕಲಹ ಶಹಾಪುರ ಸೋಲಿಗೆ ಕಾರಣ ಎಂದೇ ಚರ್ಚೆ ನಡೆದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಪ್ರಕಾಶ್ ಬಾಬಣ್ಣ ಹುಕ್ಕೇರಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿರುವುದು ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದಂತಾಗಿದೆ. ಜೆಡಿಎಸ್​ನ ಚಂದ್ರಶೇಖರ ಲೋಣಿ 554 ಮತ ಪಡೆಯುವ ಮೂಲಕ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಇನ್ನು, ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಣಮಂತ ನಿರಾಣಿ ನಿರೀಕ್ಷಿತ ಗೆಲುವು ಸಾಧಿಸುವುದು ಪಕ್ಕಾ ಆಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ ಅಭೂತಪೂರ್ವ ಗೆಲುವು ಸಾಧಿಸಿ, 8ನೇ ಬಾರಿಗೆ ಮೇಲ್ಮನೆ ಪ್ರವೇಶಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇಲ್ಲಿ ಜೆಡಿಎಸ್​ನ ಶ್ರೀಶೈಲ ಗಡದಿನ್ನಿ ಹೀನಾಯ ಸೋಲು ಅನುಭವಿಸಿದ್ದಾರೆ.

ಜೆಡಿಎಸ್ ಶೂನ್ಯ ಸಂಪಾದನೆ: ನಾಲ್ಕು ಕ್ಷೇತ್ರಗಳ ಪೈಕಿ ದಕ್ಷಿಣ ಪದವೀಧರ ಕ್ಷೇತ್ರ ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳು ಈ ಹಿಂದೆ ಜೆಡಿಎಸ್ ತೆಕ್ಕೆಯಲ್ಲಿದ್ದವು. ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಸವರಾಜ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವಿನ ಇತಿಹಾಸ ಬರೆದಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್​ನ ಆಂತರಿಕ ಕಲಹ ಬೀದಿಗೆ ಬಂದು ಪಕ್ಷದ ಅಭ್ಯರ್ಥಿ ಸೋಲಿನಲ್ಲಿ ಅಂತ್ಯಕಂಡಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳನ್ನು ಜೆಡಿಎಸ್ ಕಳೆದುಕೊಂಡಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net