

ಬೆಂಗಳೂರು: ನೈಋತ್ಯ ಮುಂಗಾರು ಮಾರುತಗಳು ದುರ್ಬಲಗೊಂಡ ಪರಿಣಾಮ ರಾಜ್ಯದಲ್ಲಿ ಕ್ಷೀಣವಾಗಿದ್ದ ಮಳೆ ಮುಂದಿನ 5 ದಿನ ವ್ಯಾಪಕವಾಗಿ ಸುರಿಯುವ ಸಾಧ್ಯತೆ ಇದೆ. ಬುಧವಾರ ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗಿದ್ದು, ಮಂಡ್ಯದಲ್ಲಿ 72 ಮಿಮೀ, ಬೆಂಗಳೂರು 31 ಮಿಮೀ, ಕೋಲಾರದ ಟಮಕಾ 15 ಮಿಮೀ ಮತ್ತು ತುಮಕೂರಿನ ಚಿಕ್ಕನಕಹಳ್ಳಿ 13 ಮಿಮೀ ಮಳೆಯಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜೂ. 17ರಿಂದ ಜೂ. 20ರವರೆಗೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಮುಂದಿನ 4 ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಆ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರದಲ್ಲಿ ಮುಂದಿನ 48 ಗಂಟೆ ವ್ಯಾಪಕವಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ.
ಮುಂಗಾರು ಪ್ರವೇಶಿಸಿ 15 ದಿನ ಕಳೆದರೂ ರಾಜ್ಯದಲ್ಲಿ ಮಾರುತಗಳು ಚುರುಕುಗೊಳ್ಳದ ಹಿನ್ನೆಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ ಹೊರತು ಜೋರಾಗಿ ಸುರಿಯುತ್ತಿಲ್ಲ. ಅಸಾನಿ ಚಂಡಮಾರುತ ಪರಿಣಾಮ ತೇವಾಂಶ ಭರಿತ ಮೋಡಗಳು ಸೆಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಾರುತಗಳ ಶಕ್ತಿ ಕಳೆದುಕೊಂಡಿದ್ದೆವು. ಮೇನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದ ಕಾರಣದಿಂದ ಹವಾಮಾನದ ಮೇಲೆ ಪರಿಣಾಮ ಬೀರಿದೆ. ರಾಜ್ಯಾದ್ಯಂತ ಈಗ ಮಾರುತಗಳು ವ್ಯಾಪಿಸಿವೆ. ಈ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ. ಮುಂದಿನ ನಾಲ್ಕೈದು ದಿನಗಳು ಚೆನ್ನಾಗಿ ಮಳೆ ಬೀಳಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.