ಗೆಲುವಿನ ಹುಮ್ಮಸ್ಸು ಉಕ್ಕೇರಿ, ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಹುಕ್ಕೇರಿ..

1288783
Published on

ಬೆಳಗಾವಿ: ವಾಯವ್ಯ ಶಿಕ್ಷಕರ ಮತ ಕ್ಷೇತ್ರದಲ್ಲಿ ಲಭಿಸಿದ ಭರ್ಜರಿ ಗೆಲುವಿನ ಉಕ್ಕೇರಿದ ಹುಮ್ಮಸ್ಸಿನಿಂದ ಕಾಂಗ್ರೆಸ್​ನ ಪ್ರಕಾಶ್ ಹುಕ್ಕೇರಿ ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ್ದಾರೆ. ಮಾತ್ರವಲ್ಲ, ಹಲ್ಲು ಮುರಿಯುವುದಾಗಿ ಗದರಿದ್ದಾರೆ.

ಬೆಳಗಾವಿಯ ಜ್ಯೋತಿ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ಅಭ್ಯರ್ಥಿಯನ್ನು ಬಿಟ್ಟು ಇನ್ನಿತರರನ್ನು ಮತ ಎಣಿಕೆ ಕೇಂದ್ರದ ಒಳಗೆ ಬಿಡಲು ನಿರಾಕರಿಸಿದ್ದಕ್ಕೆ ಪ್ರಕಾಶ್ ಹುಕ್ಕೇರಿ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಎಸಿಪಿ ಸದಾಶಿವ ಕಟ್ಟಿಮನಿ ಅವರಿಗೆ 'ಬಾಯಿಯಲ್ಲಿನ ಹಲ್ಲು ಮುರಿತೇನಿ' ಎಂಬುದಾಗಿ ಬಹಿರಂಗವಾಗಿ ಗದರಿದ್ದಾರೆ.

ಪ್ರಮಾಣ ಪತ್ರ ಪಡೆಯಲು ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದ್ದಾಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದವರೂ ಅಲ್ಲಿಗೆ ಬಂದಿದ್ದರು. ಆದರೆ ಮತ ಎಣಿಕೆ ಕೇಂದ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪೊಲೀಸರು ತಡೆದಿದ್ದರು.

ಈ ವೇಳೆ ಹೆಬ್ಬಾಳ್ಕರ್ ಅವರನ್ನ ಕರೆಯಲು ಪ್ರಕಾಶ್ ಹುಕ್ಕೇರಿ ಹೊರಬಂದಿದ್ದರು. ಆಗ ನಮ್ಮದೇನಿಲ್ಲ ಎಂದು ಪ್ರಕಾಶ್‌ ಹುಕ್ಕೇರಿಗೆ ಎಸಿಪಿ ಕಟ್ಟಿಮನಿ ಸಮಜಾಯಿಷಿ ಕೊಡಲು ಮುಂದಾಗಿದ್ದರು. ಆಗ ನಿಮ್ಮ ಬಾಯಿಯಲ್ಲಿನ ಹಲ್ಲು ಮುರಿತೇನಿ ಅಂತ ಎಸಿಪಿಗೆ ಗದರಿದ ಹುಕ್ಕೇರಿ, ಹೆಬ್ಬಾಳ್ಕರ್ ಅವರನ್ನು ಒಳಗೆ ಕರೆದುಕೊಂಡು ಹೋದರು. ನಮ್ಮನ್ನು ಏನಂತ ತಿಳಿದುಕೊಂಡಿದ್ದೀರಿ ನೀವು ಅಂತ ಹೆಬ್ಬಾಳ್ಕರ್ ಕೂಡ ಪೊಲೀಸರಿಗೆ ಈ ವೇಳೆ ಗದರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net