

ನವದೆಹಲಿ: ಕರೊನಾ ಲಸಿಕೆಗೆ ಸಂಬಂಧಿಸಿದ ವೆಚ್ಚಗಳನ್ನು ನಿಭಾಯಿಸಲು, ಕೇಂದ್ರ ಹಣಕಾಸು ಸಚಿವರು "ಕರೊನಾ ಕರ"ವನ್ನು ಜಾರಿಗೆ ತರಬಹುದೆಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ಕಂಪೆನಿ ತನ್ನ ಬಜೆಟ್ ನಿರೀಕ್ಷೆಗಳ ಕುರಿತಾದ ವರದಿಯಲ್ಲಿ ಹೇಳಿದೆ.
"2021-22ನೇ ಹಣಕಾಸು ವರ್ಷದ ಬಜೆಟ್ನಲ್ಲಿ ಪರಿಗಣಿಸಲಾಗುವ ಪ್ರಮುಖ ವಿಷಯಗಳು ಕೋವಿಡ್-19 ರ ಸುತ್ತ ಕೇಂದ್ರೀಕೃತವಾಗಿರಲಿವೆ. ನೇರವಾಗಿ ಆರೋಗ್ಯ ವಿಚಾರಕ್ಕೆ (ಲಸಿಕೆಗಳಿಗೆ) ಅಥವಾ ಅತಿಹೆಚ್ಚು ಬಾಧೆಗೊಳಗಾಗಿರುವ (ಉದಾಹರಣೆಗೆ ಹಾಸ್ಪಿಟಾಲಿಟಿ, ರಿಟೇಲ್, ಏವಿಯೇಶನ್) ಕ್ಷೇತ್ರಗಳನ್ನು ಬೆಂಬಲಿಸುವ ವಿಚಾರಕ್ಕೆ ಸಂಬಂಧಿಸಿದ ವಿಷಯಗಳು ಆಗಲಿವೆ" ಎಂದು ತನ್ನ ಪ್ರೀ-ಬಜೆಟ್ 2021 ಎಕ್ಸ್ಪೆಕ್ಟೇಶನ್ಸ್ ಎಂಬ ವರದಿಯಲ್ಲಿ ಎಚ್ಡಿಎಫ್ಸಿ ಸೆಕ್ಯುರಿಟೀಸ್ ಕಂಪೆನಿ ವಿವರಿಸಿದೆ. ಈ ಹಿನ್ನೆಲೆಯಲ್ಲಿ ಕರೊನಾ ಲಸಿಕೆಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರ 'ಕರೊನಾ ಕರ'ವನ್ನು ವಿಧಿಸಬಹುದು ಎಂದು ಮುಂಬೈನ ಈ ಹಣಕಾಸು ಸೇವಾ ಕಂಪನಿ ಅಭಿಪ್ರಾಯಪಟ್ಟಿದೆ.
ಕರೊನಾ ಮಹಾಮಾರಿ ತಂದ ಬದಲಾವಣೆಗಳ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಈಗಾಗಲೇ ತಮ್ಮ ಈ ಬಾರಿಯ ಬಜೆಟ್ 'ಕಳೆದ 100 ವರ್ಷಗಳಲ್ಲಿ ನೋಡಿಲ್ಲದಂತಹ ಬಜೆಟ್' ಆಗಿರುತ್ತದೆ ಎಂದು ಹೇಳಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 'ಕಾಗದರಹಿತ'ವಾಗಿ ಮಂಡಿಸಲಾಗುವ ಬಜೆಟ್ ಇದಾಗಲಿದೆ.
ಹಲವು ಇತರ ಸಲಹೆಗಳನ್ನು ನೀಡಿರುವ ಎಚ್ಡಿಎಫ್ಸಿ ಸೆಕ್ಯುರಿಟೀಸ್, ಈ ಬಾರಿಯ ಹೂಡಿಕೆ ಸಂಬಂಧಿ ಗುರಿಯು ಮಹತ್ವಾಕಾಂಕ್ಷಿಯಾಗಿರಲಿದೆ ಎಂದಿದೆ. ಪ್ರಸಕ್ತ ಹಣಕಾಸು ವರ್ಷದ ಫಿಸ್ಕಲ್ ಡಿಫಿಸಿಟ್ ಪ್ರಮಾಣವು ಜಿಡಿಪಿಯ ಶೇ. 7.6 ರಷ್ಟಿದ್ದು, ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರವು ಶೇ. 5.2 ಫಿಸ್ಕಲ್ ಡಿಫಿಸಿಟ್ ಅನ್ನು ಗುರಿಯಾಗಿರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. (ಏಜೆನ್ಸೀಸ್)