ಕರೊನಾ ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಗಮನ ಸೆಳೆದ ಥಾಯ್ಲೆಂಡ್​

Corona vaccine- Zydus
Published on

ಬ್ಯಾಂಕಾಕ್​: ಜನಸಂಖ್ಯೆಯಲ್ಲಿ ಪರಿಗಣಿಸುವುದಾದರೆ ಥಾಯ್ಲೆಂಡ್​ಅನ್ನು ಕರ್ನಾಟಕಕ್ಕೆ ಹೋಲಿಸಬಹುದು. ಪ್ರಮುಖವಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಈ ದೇಶ ಇದೀಗ ಸಂಶೋಧನೆಯಿಂದಾಗಿ ಜಗತ್ತಿನ ಗಮನವನ್ನೇ ತನ್ನತ್ತ ಸೆಳೆದಿದೆ.

ಹೌದು... ಸದ್ಯ ಇಡೀ ವಿಶ್ವದಲ್ಲಿ ನೂರಾರು ಕಂಪನಿಗಳು ಕರೊನಾಗೆ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ತೊಡಗಿವೆ. ಈ ನಿಟ್ಟಿನಲ್ಲಿ ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಥಾಯ್ಲೆಂಡ್​ ಕೂಡ ಕಾರ್ಯಪ್ರವೃತ್ತವಾಗಿದೆ. ತಾನು ತಯಾರಿಸಿದ ಲಸಿಕೆಗೆ ಇಲಿಗಳ ಮೇಲೆ ಯಶಸ್ವಿಯಾಗಿದ್ದು, ಮುಂದಿನ ಹಂತವಾಗಿ ಕೋತಿಗಳ ಮೇಲೆ ಪ್ರಯೋಗಿಸುವುದಾಗಿ ಘೋಷಿಸಿದೆ. ಎಲ್ಲ ಹಂತಗಳು ಇದೇ ವೇಗದಲ್ಲಿ ಯಶಸ್ಸು ಪಡೆದಲ್ಲಿ ಮುಂದಿನ ಒಂದು ವರ್ಷದಲ್ಲಿ ಲಸಿಕೆ ಸಿದ್ಧವಾಗಲಿದೆ ಎಂದು ಹೇಳಿದೆ.

ಕೋತಿಗಳ ಮೇಲೆ ಲಸಿಕೆ ಪ್ರಯೋಗಿಸುವ ಕಾರ್ಯ ಶುರುವಾಗಿದೆ. ಸೆಪ್ಟೆಂಬರ್​ ವೇಳೆಗೆ ಇದರ ಕಾರ್ಯಕ್ಷಮತೆಯ ಫಲಿತಾಂಶ ಹೊರಬೀಳಲಿದೆ ಎಂದು ಥಾಯ್ಲೆಂಡ್​ನ ಉನ್ನತ ಶಿಕ್ಷಣ ಸಚಿವ ಸುವಿತ್​ ಮೆಸಿನ್ಸೀ ಪ್ರಕಟಿಸಿದ್ದಾರೆ.

ನ್ಯಾಷನಲ್​ ವ್ಯಾಕ್ಸೀನ್​ ಇನ್​ಸ್ಟಿಟ್ಯೂಟ್​ ಹಾಗೂ ಚುಲಾಲೊಂಗ್​ಕರ್ಣ್​ ವಿಶ್ವವಿದ್ಯಾಲಯದ ಲಸಿಕೆ ಸಂಶೋಧನಾ ವಿಭಾಗ ಈ ಆವಿಷ್ಕಾರದಲ್ಲಿ ತೊಡಗಿದೆ. ಜತೆಗೆ, ಲಸಿಕೆ ತಯಾರಿಕೆಗಾಗಿ ಎರಡು ಉತ್ಪಾದನಾ ಸಂಸ್ಥೆಗಳನ್ನು ಥಾಯ್ಲೆಂಡ್​ ಮೀಸಲಾಗಿಟ್ಟಿದೆ.

ಕರೊನಾವನ್ನು ಹಿಮ್ಮೆಟ್ಟಿಸುವುದು ಮಾನವ ಕುಲದ ಉದ್ದೇಶವಾಗಿದೆ. ಇದು ಕೇವಲ ಥಾಯ್​ ಜನರಿಗಾಗಲ್ಲ. ಕರೊನಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಥಾಯ್ಲೆಂಡ್​ ಈ ಮೂಲಕ ಭಾಗಿಯಾಗುತ್ತಿದೆ ಎಂದು ಸುವಿತ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net