ಕರೊನಾ ಸೋಂಕಿಗೆ ಪ್ರಾಣಬಿಟ್ಟ ಪತ್ನಿ: ಪ್ರೀತಿಸಿ ಮದುವೆಯಾದಾತ ಪತ್ನಿಯನ್ನೇ ಬಿಟ್ಟೋಡಿದ!

corona - husband leaves wife in pathetic condition
Published on

ಬೆಂಗಳೂರು: ಪತ್ನಿಗೆ ಕರೊನಾ ಸೋಂಕು ಬಂದಿದೆಯೆಂದು ತಿಳಿದ ಪತಿ ಆಕೆಯನ್ನು ಬಿಟ್ಟುಹೋಗಿದ್ದು, ಪ್ರೀತಿಸಿ ಮದುವೆಯಾದ ಗಂಡನ ಆಸರೆಯೂ ಇಲ್ಲದೆ ಸೂಕ್ತ ಆರೈಕೆಯೂ ಸಿಗದೆ ಮಹಿಳೆ ಒಬ್ಬಂಟಿಯಾಗಿ ಮನೆಯಲ್ಲೇ ಪ್ರಾಣ ಬಿಟ್ಟಿರುವ ಮನಕಲಕುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

ಮಹಾಲಕ್ಷ್ಮೀ ಲೇಔಟ್​ನ ಶಂಕರಮಠ ವಾರ್ಡ್​ನಲ್ಲಿ ವಾಸವಿದ್ದ ವಿಜಯಪುರ ಮೂಲದ ಗೌರಿ (27) ಮೃತೆ. ಪತ್ನಿಗೆ ಕರೊನಾ ವೈರಸ್ ದೃಢವಾಗುತ್ತಿದ್ದಂತೆ ಪರಾರಿಯಾಗಿ ಮೊಬೈಲ್ ಆಫ್ ಮಾಡಿಕೊಂಡಿದ್ದ ಪತಿ ಮಂಜುನಾಥ್​ಗೆ ಗೌರಿಯ ನಿಧನದ ಸುದ್ದಿ ತಿಳಿಸಿದರೂ ಅಂತ್ಯಕ್ರಿಯೆಗೆ ಬಂದಿಲ್ಲ. ಕೊನೆಗೆ ಸ್ಥಳೀಯರೇ ಅಂತ್ಯಸಂಸ್ಕಾರ ಮಾಡಿದ್ದಾರೆ.

2 ವರ್ಷಗಳ ಹಿಂದೆ ಪ್ರೀತಿಸಿ ಮದುವೆ: ವಿಜಯಪುರ ಮೂಲದವರಾದ ಮಂಜುನಾಥ್ ಮತ್ತು ಗೌರಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಮಂಜುನಾಥ್ ಕಾರು ಚಾಲಕನಾಗಿ ಹಾಗೂ ಗೌರಿ ನಗರದ ಶಾಪಿಂಗ್ ಮಾಲ್​ವೊಂದರಲ್ಲಿ ಸೇಲ್ಸ್​ಗರ್ಲ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಮಂಜುನಾಥ್ ವಿರುದ್ಧ ಆತ ಬಾಡಿಗೆಗಿದ್ದ ಮನೆ ಮಾಲೀಕರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಆಗಿದ್ದೇನು?: ನಾಲ್ಕೈದು ದಿನಗಳಿಂದ ಗೌರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಶುಕ್ರವಾರ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇದೇ ವೇಳೆ ಕೋವಿಡ್ ಪರೀಕ್ಷೆ ಕೂಡ ಮಾಡಿಸಲಾಗಿತ್ತು. ಶನಿವಾರ ಬಂದ ವರದಿಯಲ್ಲಿ ಕರೊನಾ ದೃಢವಾಗಿತ್ತು. ಅಲ್ಲಿಯವರೆಗೆ ಜತೆಯಲ್ಲಿದ್ದ ಗಂಡ ಮಂಜುನಾಥ್, ಪತ್ನಿಗೆ ಸೋಂಕಿರುವುದು ಗೊತ್ತಾಗುತ್ತಿದ್ದಂತೆ ಆಕೆಗೆ ಮನೆಗೆ ಹೋಗುವಂತೆ ಹೇಳಿ ಅಲ್ಲಿಂದಲೇ ಪರಾರಿಯಾಗಿದ್ದಾನೆ.

ಮನೆಗೆ ಬಂದ ಗೌರಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಮನೆ ಮಾಲೀಕ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಲಗಿದ ಸ್ಥಿತಿಯಲ್ಲೇ ಗೌರಿ ಕೊನೆಯುಸಿರೆಳೆದಿದ್ದಾಳೆ. ಆಕೆ ಮೃತಪಟ್ಟಿರುವ ಬಗ್ಗೆ ಮಂಜುನಾಥನಿಗೆ ಕರೆ ಮಾಡಿ ತಿಳಿಸಿದರೂ ಆತ ಬಂದಿಲ್ಲ. ನಂತರ ಸ್ಥಳೀಯ ಕಾರ್ ರೇಟರ್ ಎಂ. ಶಿವರಾಜು ಸೇರಿ ಇತರ ಸ್ಥಳೀಯರು ಬಿಬಿಎಂಪಿ ಸಿಬ್ಬಂದಿಯೊಡನೆ ಗೌರಿಯ ಅಂತ್ಯಕ್ರಿಯೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net