ರಾಜ್ಯದಲ್ಲಿ ಕರೊನಾಗೆ ಮೂರು ಬಲಿ: 2976 ಮಂದಿ ಆಸ್ಪತ್ರೆಯಿಂದ ಬಿಡುಗಡೆ

Corona
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆ ಆಗುತ್ತಿದ್ದರೂ, ಅದೇ ಸಂಖ್ಯೆಯಲ್ಲಿ ಬಿಡುಗಡೆ ಹೊಂದುವವರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವುದೇ ಸಮಾಧಾನದ ಸಂಗತಿ.

ಇಂದು 204 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6295ಕ್ಕೆ ಏರಿಕೆಯಾಗಿದೆ. ಈ ಪೈಕಿ 157 ಮಂದಿ ಹೊರ ರಾಜ್ಯಗಳಿಂದ ಬಂದವರು.

ಇದಾಗಲೇ 2976 ಮಂದಿ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 114 ಮಂದಿ ಬಿಡುಗಡೆ ಹೊಂದಿದ್ದಾರೆ.

ಸೋಂಕಿನಿಂದ ಒಂದೇ ದಿನ ಮೂರು ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 35 ವರ್ಷ ಹಾಗೂ 60 ವರ್ಷದ ವ್ಯಕ್ತಿ ಮತ್ತು ರಾಯಚೂರು ಜಿಲ್ಲೆಯ 28 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಪ್ರಕರಣ ವರದಿಯಾಗಿದೆ ಎಂಬ ವಿವರ ಇಲ್ಲಿದೆ.

ಯಾದಗಿರಿ 66; ಉಡುಪಿ 22; ಬೆಂಗಳೂರು ನಗರ 17; ಕಲಬುರಗಿ 16; ರಾಯಚೂರು 15; ಬೀದರ್​ 14; ಶಿವಮೊಗ್ಗ 10; ದಾವಣಗೆರೆ 9; ಕೋಲಾರ 6; ಮೈಸೂರು ಮತ್ತು ರಾಮನಗರ ತಲಾ 5; ವಿಜಯಪುರ 4; ಬಾಗಲಕೋಟೆ ಮತ್ತು ಉತ್ತರ ಕನ್ನಡ ತಲಾ 3; ದಕ್ಷಿಣ ಕನ್ನಡ, ಹಾಸನ ಮತ್ತು ಧಾರವಾಡ ತಲಾ 2; ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಪ್ಪಳ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.

ಮಂಡ್ಯ, ಬೆಳಗಾವಿ, ಚಿಕ್ಕಬಳ್ಳಾಪುರ, ಬಳ್ಳಾರಿ, ಗದಗ, ಚಿತ್ರದುರ್ಗ, ತುಮಕೂರು, ಹಾವೇರಿ, ಕೊಡಗು, ಚಾಮರಾಜನಗರದಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net