ಮಾವು ಬೆಳೆಗಾರರಿಗೆ ಕೋವಿಡ್ ಸಂಕಷ್ಟ: ಹೊರಗಿನ ವ್ಯಾಪಾರಸ್ಥರು ಬಂದರಷ್ಟೇ ಬೇಡಿಕೆ

State Mango
ಶ್ರೀನಿವಾಸಪುರದ ಎಪಿಎಂಸಿಯಲ್ಲಿ ಮಾವಿನ ಮಂಡಿ ತೆರೆದು ರೈತರಿಂದ ಖರೀದಿಸಿರುವ ರಾಜಗಿರ ಮಾವು.
Published on

| ಪಿ.ಎಸ್.ಹರೀಶ್ ಕೋಲಾರ

ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ಕೋಲಾರ. ಅದರಲ್ಲೂ ಶ್ರೀನಿವಾಸಪುರ ಮಾವಿನ ತವರೂರು. ಆದರೆ ಕರೊನಾ ಎರಡನೇ ಅಲೆ ಆತಂಕದ ನಡುವೆ ಹಂಗಾಮು ಆರಂಭಗೊಳ್ಳುತ್ತಿದ್ದು, ಮಾರಾಟ ದೊಡ್ಡ ಸಮಸ್ಯೆಯಾಗಿದೆ. ರಾಜ್ಯದಲ್ಲಿ 1.67 ಲಕ್ಷ ಹೆಕ್ಟೇರ್​ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆ ಹೆಚ್ಚು ಮಾವು ಬೆಳೆಯುವ ಪ್ರದೇಶಗಳಾಗಿವೆ. ವಿವಿಧ ಜಿಲ್ಲೆಗಳ ಮಾವು ಈಗಾಗಲೆ ಮಾರುಕಟ್ಟೆ ಪ್ರವೇಶಿಸಿದೆ. ಜನವರಿಯಲ್ಲಿ ಬಿದ್ದ ಅಕಾಲಿಕ ಮಳೆಗೆ ಹೂವುಗಳು ಉದುರಿದ್ದರಿಂದ ಶೇ.30 ಫಸಲು ಬಂದಿದೆಯಾದರೂ ಬೆಳೆಗಾರರನ್ನು ಕರೊನಾ ಮಂಕಾಗಿಸಿದೆ.

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಶ್ರೀನಿವಾಸಪುರವೇ ಅತಿ ದೊಡ್ಡ ಮಾರುಕಟ್ಟೆ. ಈಗಾಗಲೆ ಐದಾರು ಮಂಡಿ ತಲೆ ಎತ್ತಿದ್ದು, ಖರೀದಿ ಆರಂಭಿಸಿವೆ. ರಾಜಗಿರ ತಳಿ ಕೊಯ್ಲಿಗೆ ಬಂದಿದ್ದು, ಕ್ವಿಂಟಾಲ್​ಗೆ 10,000 ರಿಂದ 15,000 ರೂ.ವರೆಗೆ ಮಾರಾಟವಾಗುತ್ತಿದೆ. ಮುಂದಿನ 15-20 ದಿನಗಳಲ್ಲಿ ಇತರ ತಳಿ ಕೊಯ್ಲಿಗೆ ಬರಲಿದೆ. ಆದರೆ, ಇಲ್ಲಿನ ಮಾವು ಉತ್ತರ ಭಾರತದ ಕಡೆ ಹೆಚ್ಚು ರವಾನೆಯಾಗುತ್ತದೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ಇನ್ನಿತರ ರಾಜ್ಯಗಳ ವ್ಯಾಪಾರಸ್ಥರು ಬಂದರೆ ಉತ್ತಮ ಬೆಲೆ ಸಿಗಬಹುದು. ಇಲ್ಲವಾದಲ್ಲಿ ಅಷ್ಟಕ್ಕಷ್ಟೆ.

ಎಪಿಎಂಸಿಯಲ್ಲಿ ಹಂಗಾಮು ಆರಂಭ: ಆಗುತ್ತಿದ್ದಂತೆ ಸಾವಿರಾರು ಕೂಲಿ ಕಾರ್ವಿುಕರು, ಲಾರಿ ಚಾಲಕರು, ಸಹಾಯಕರು, ಮಂಡಿ ವರ್ತಕರು, ದಲ್ಲಾಳಿಗಳು ಸೇರಿ ಸಾವಿರಾರು ಜನ ಸೇರುವ ಸಂದರ್ಭದಲ್ಲಿ ಕರೊನಾ ಮಾರ್ಗಸೂಚಿ ಪಾಲನೆ ನಿಟ್ಟಿನಲ್ಲಿ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ಇಲಾಖೆ ಸಭೆ ನಡೆಸಿ ಕ್ರಮ ವಹಿಸಬೇಕಿತ್ತು. ಆದರೆ ಈವರೆಗೂ ಯಾವುದೇ ಕ್ರಮ ವಹಿಸಿಲ್ಲ.

ಆನ್​ಲೈನ್, ಅಂಚೆ ಸೇವೆ ಲಭ್ಯ: ಬೆಂಗಳೂರಿನಲ್ಲಿ 700ಕ್ಕೂ ಅಧಿಕ ಅಪಾರ್ಟ್ ಮೆಂಟ್​ಗಳಿದ್ದು, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಬೆಂಗಳೂರು ಅಪಾರ್ಟ್​ವೆುಂಟ್ ಫೆಡರೇಷನ್ ಸಹಯೋಗದಲ್ಲಿ ಮಾವಿನ ಹಣ್ಣನ್ನು ಬೆಳೆಗಾರರಿಂದ ಗ್ರಾಹಕರಿಗೆ ತಲುಪಿಸಲು ನೇರ ಮಾರಾಟಕ್ಕೆ ಆನ್​ಲೈನ್ ವ್ಯವಸ್ಥೆ ಕಲ್ಪಿಸಿದ್ದು, ಕಳೆದ ವರ್ಷ 600 ಟನ್ ಮಾರಾಟ ಮಾಡಿತ್ತು. ಈ ವರ್ಷವೂ ಆನ್​ಲೈನ್ ಮೂಲಕ ಮಾರಾಟ, ಖರೀದಿ ವ್ಯವಸ್ಥೆ ಕಲ್ಪಿಸಿದೆ. ಸ್ವೀಕೃತವಾಗುವ ಎಲ್ಲ ಆರ್ಡರ್​ಗಳನ್ನು ಅಂಚೆ ಇಲಾಖೆ ಪಾರ್ಸಲ್ ಸೇವೆ ಮೂಲಕ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಗ್ರಾಹಕರಿಗೆ ತಲುಪಿಸಲಿದೆ. ಕರ್​ಸಿರಿ ಪೋರ್ಟಲ್ ಆನ್​ಲೈನ್ ಲಿಂಕ್​ https://> karsirimangoes.karnataka.gov.in ಸಂಪರ್ಕಿಸಬಹುದು.

ನಿಗಮವು ಆನ್​ಲೈನ್ ಮೂಲಕ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸಿ ಮಾವು ಬೆಳೆಗಾರರಿಗೆ ಆರ್ಡರ್ ಕೊಡಿಸುತ್ತಿದ್ದು, ಪ್ರತಿನಿತ್ಯ 1.5 ಟನ್ ಇಂಡೆಂಟ್ ಬರುತ್ತಿದೆ. ಬೆಂಗಳೂರು ನಗರದ ನಂದಿನಿ ಪಾರ್ಲರ್ ಬಳಿ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಕೆಎಂಎಫ್ ಅಧ್ಯಕ್ಷರು, ಎಂಡಿಗೆ ಪತ್ರ ಬರೆಯಲಾಗಿದೆ. ಕರೊನಾ ಕಾರಣದಿಂದ ನೇರ ಭೇಟಿ ಸಾಧ್ಯವಾಗಿಲ್ಲ.

| ಕೆ.ವಿ. ನಾಗರಾಜ್ ಅಧ್ಯಕ್ಷ, ರಾಜ್ಯ ಮಾವು ಮಂಡಳಿ

ಮಾವು ಮಾರಾಟ ದೊಡ್ಡ ರೈತರಿಗೆ ಸಮಸ್ಯೆ ಯಾಗಿದ್ದು, ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಗಾರರ ಸಂಘದ ಪ್ರತಿನಿಧಿಗಳೊಂದಿಗೆ ರ್ಚಚಿಸಿಲ್ಲ. ಬೆಂಗಳೂರು ನಗರದಲ್ಲಿ 2000ಕ್ಕೂ ಹೆಚ್ಚು ನಂದಿನಿ ಪಾರ್ಲರ್​ಗಳಿದ್ದು, ಅವುಗಳ ಪಕ್ಕ ಮ್ಯಾಂಗೋ ಪಾರ್ಲರ್ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಬೇಕು.

| ನೀಲಟೂರು ಚಿನ್ನಪ್ಪರೆಡ್ಡಿ ಅಧ್ಯಕ್ಷ, ಜಿಲ್ಲಾ ಮಾವು ಬೆಳೆಗಾರರ ಸಂಘ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net