

ಚಾಮರಾಜನಗರ: ಕರೊನಾ ಹಾವಳಿಯಿಂದ ಈಗಾಗಲೇ ಕಂಗೆಟ್ಟಿರುವ ಚಾಮರಾಜನಗರದ ಜನರಿಗೆ ಈಗ ಭೀಕರ ಅಪಘಾತದ ಸುದ್ದಿಯೊಂದು ಬಂದೆರಗಿದೆ. ಸ್ಟೇರಿಂಗ್ ಕಟ್ ಆದ ಕಾರಣ ಒಂದು ಜೀಪ್ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾಮರಾಜನಗರ ಮಲೈಮಹದೇಶ್ವರ ಬೆಟ್ಟದಲ್ಲಿ ಈ ಅಪಘಾತ ಸಂಭವಿಸಿದೆ. ಜೀಪ್ನಲ್ಲಿದ್ದವರೆಲ್ಲ ತುಳಸೀಕೆರೆ ಗ್ರಾಮದವರಾಗಿದ್ದು, ಇವರೆಲ್ಲ ಇಂಡಿ ಇಂಡಿ ಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಪಘಾತದಲ್ಲಿ ತುಳಸೀಕೆರೆಯ ವೀರಣ್ಣ (75) ಮೃತ ಪಟ್ಟಿದ್ದಾರೆ.
ಜೀಪ್ 30 ಅಡಿ ಆಳಕ್ಕೆ ಉರುಳಿ ನಜ್ಜುಗುಜ್ಜಾಗಿದೆ. ಪ್ರಯಾಣಿಕರ ಪೈಕಿ 12 ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಮಿಳುನಾಡಿನ ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.