ಗಿಟಾರ್​ ನುಡಿಸಿ ರೈಲು ಪ್ರಯಾಣಿಕರನ್ನು ರಂಜಿಸಿದ ಕರೊನಾ ಸೇನಾನಿ

Copp1
Published on

ಜಮ್ಮು: ಕರೊನಾ ವೈರಸ್ ಕಾಯಿಲೆ ತರುವುದರ ಜತೆಗೆ ಜಗತ್ತಿಗೆ ಕಂಟಕವಾಗಿದೆ. ಎಲ್ಲರೂ ಮುಳುಗುತ್ತಿರುವ ಒಂದೇ ಹಡಗಿನಲ್ಲಿ ಪಯಣಿಸುತ್ತಿರುವಾಗ ಮತ್ತೊಬ್ಬರ ಕಣ್ಣೀರೊರೆಸುವವರಾದರೂ ಯಾರು? ಎಂಬಂತಾಗಿದೆ ಎಲ್ಲರ ಪರಿಸ್ಥಿತಿ.

ಜಗತ್ತಿಗೆ ಅರಗಿಸಿಕೊಳ್ಳಲಾಗದ ವಿಷಮ ಸ್ಥಿತಿ ಎಂದರೆ ಲಾಕ್​ಡೌನ್ ಘಳಿಗೆ. ವಿಶೇಷವಾಗಿ ಮನೆಯಿಂದ, ಕುಟುಂಬಗಳಿಂದ ದೂರವಿರುವವರಿಗೆ ಇದು ಇನ್ನೂ ಕೆಟ್ಟ ಸಮಯ ಎಂದೇ ಹೇಳಬಹುದು.

ಇಂಥ ಉಸಿರುಗಟ್ಟುವ ವಾತಾವರಣದ ಮಧ್ಯೆಯೂ ಒಂದು ರೀತಿಯ ಭರವಸೆ ಮತ್ತು ನಕಾರಾತ್ಮಕತೆಯನ್ನು ತರಲು ಪ್ರಯತ್ನಿಸುತ್ತಿರುವ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಹೇರಳವಾಗಿವೆ.

ಇತ್ತೀಚೆಗೆ ಇಂತಹ ಆಕರ್ಷಕ ದೃಶ್ಯಾವಳಿಗಳಿಂದ ಸಾಮಾಜಿಕ ಜಾಲತಾಣ ತುಂಬಿಹೋಗಿದೆ. ಹೆಚ್ಚಾಗಿ ವೈದ್ಯಕೀಯ ಮತ್ತು ಪ್ರಪಂಚದಾದ್ಯಂತ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ, ಈ ಕಠಿಣ ಸಮಯದಲ್ಲಿ ಜನರ ಉತ್ಸಾಹವನ್ನು ಹೆಚ್ಚಿಸುವ ಯತ್ನ ನಡೆದಿವೆ. ಸಾವಿರಾರು ಜನರ ಮನಮುಟ್ಟಿದ ಅಂಥ ಒಂದು ದೃಶ್ಯಾವಳಿ ಇಲ್ಲೂ ಒಂದಿದೆ ನೋಡಿ.

ಒಬ್ಬ ಪೊಲೀಸ್ ಸಿಬ್ಬಂದಿ ಜಮ್ಮುವಿನಿಂದ ತಮ್ಮ ಮನೆಗಳಿಗೆ ಹೊರಟಿದ್ದ ರೈಲು ಪ್ರಯಾಣಿಕರ ಮುಂದೆ ಪ್ರದರ್ಶನ ನೀಡುತ್ತಾರೆ.

ಈ ಕೆಲ ದಿನಗಳ ಹಿಂದೆ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುವವರಿಗೆ ವಿಶೇಷ ರೈಲುಗಳನ್ನು ಕೇಂದ್ರ ಸರ್ಕಾರವು ಘೋಷಿಸಿತ್ತು.

ಅಂತಹ ಸಂದರ್ಭದಲ್ಲಿ ಪೊಲೀಸ್ ಹಾಡಿದ ಹೃದಯಸ್ಪರ್ಶಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಪೋಲೀಸ್ ಗಿಟಾರ್ ಅನ್ನು ಅದ್ಭುತವಾಗಿ ನುಡಿಸುತ್ತ ‘ಗುಲಾಬಿ ಆಂಖೇನ್’ ಹಾಡು ಹಾಡುತ್ತಿದ್ದರು. ಅವರ ಸುತ್ತ ಜನಸ್ತೋಮವೇ ನೆರೆದಿತ್ತು. ತಮ್ಮ ಕಲೆ ಪ್ರದರ್ಶಿಸುವ ಮೂಲಕ ಸುತ್ತಲಿನ ಜನರನ್ನು ಅವರು ಆಕರ್ಷಿಸಿದ್ದರು. ಜಮ್ಮು ತಾವಿ ರೈಲು ನಿಲ್ದಾಣದ ಮುಂಭಾಗದಲ್ಲಿ ಇದನ್ನು ಮಾಡಲಾಗಿದ್ದು, ಜನರು ರೈಲು ಹಿಡಿಯಲು ಸಾಲುಗಟ್ಟಿ ನಿಂತಿದ್ದರು.

COVID ಸಮಯದಲ್ಲಿ ಜಮ್ಮುವಿನಿಂದ ಹೊರಟ ಮೊದಲ ರೈಲಿನ ಪ್ರಯಾಣಿಕರಿಗಾಗಿ ಹಾಡುತ್ತಿರುವುದಾಗಿ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಆಗ ಅವರ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅವರ ಅಭಿನಯವನ್ನು ಶ್ಲಾಘಿಸುವುದರ ಜೊತೆಗೆ ನಮಸ್ಕರಿಸಿ, ಅವರನ್ನು ‘ಕರೋನಾ ಸೇನಾನಿ ಎಂದು ಶ್ಲಾಘಿಸಿದ್ದಾರೆ. ಸುತ್ತಮುತ್ತಲಿನ ಜನರ ಮನೋಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಈ ಕಠಿಣ ಸಮಯದಲ್ಲಿ ಅವರನ್ನು ಹುರಿದುಂಬಿಸಲು ಇಂತಹ ವಿಡಿಯೋಗಳು ತುಂಬಾ ಅಗತ್ಯವಾಗಿವೆ. ಮಾರಣಾಂತಿಕ ವೈರಸ್ ವಿರುದ್ಧದ ಈ ಹೋರಾಟದಲ್ಲಿ ಅವರು ಏಕಾಂಗಿಯಾಗಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡುವುದು ಸಹ ಮುಖ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net