ವ್ಯಾಜ್ಯ ಬಗೆಹರಿಸಲು 5 ಕೆಜಿ ಆಲೂಗಡ್ಡೆಗೆ ಬೇಡಿಕೆಯಿಟ್ಟ ಸಬ್ ​ಇನ್ಸ್​​ಪೆಕ್ಟರ್​; ಸೇವೆಯಿಂದ ಅಮಾನತು, ಕಾರಣ ಹೀಗಿದೆ

Potato Cop
Published on

ಲಖನೌ: ಪ್ರಕರಣ ಒಂದನ್ನು ಇತ್ಯರ್ಥಪಡಿಸಲು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಐದು ಕೆಜಿ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತಾಗಿರುವ ಘಟನೆ ಉತ್ತರಪ್ರದೇಶದ ಕನೌಜ್​ನಲ್ಲಿ ನಡೆದಿದೆ.

ಅಮಾನತಾದ ಅಧಿಕಾರಿಯ ಹೆಸರು ರಾಮ್​ಕೃಪಾಲ್​ ಸಿಂಗ್​ ಎಂದು ತಿಳಿದು ಬಂದಿದ್ದು, ಇವರು ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಆಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಅಮಾನತಾದ ಅಧಿಕಾರಿಯು ಲಂಚಕ್ಕಾಗಿ ಆಲೂಗಡ್ಡೆ ಎಂಬ ಪದವನ್ನು ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ವೈರಲ್​ ಆಗಿರುವ ಆಡಿಯೋ ಕೇಳುವುದಾದರೆ ಪೊಲೀಸ್​ ಅಧಿಕಾರಿಯೂ ರೈತರೊಬ್ಬರ ವ್ಯಾಜ್ಯವನ್ನು ಇತ್ಯರ್ಥಪಡಿಸಲು 5 ಕೆಜಿ ಆಲೂಗಡ್ಡೆ ಬೇಕೆಂಡು ಹೇಳುತ್ತಾರೆ. ಇದಕ್ಕೆ ಒಪ್ಪದ ರೈತ ಎರಡು ಕೆಜಿ ಕೊಡುವುದಾಗಿ ಹೇಳುತ್ತಾನೆ. ಆದರೆ, ರೈತನ ಮಾತಿಗೆ ಕೋಪಗೊಳ್ಳುವ ಅಧಿಕಾರಿ 5 ಕೆಜಿ ಆಲೂಗಡ್ಡೆ ಬೇಕೆಂದು ಪಟ್ಟು ಹಿಡಿಯುತ್ತಾರೆ. ಅಂತಿಮವಾಗಿ 3 ಕೆಜಿ ಆಲೂಗಡ್ಡೆಯನ್ನು ಕಳಿಸಿಕೊಡುವಂತೆ ಹೇಳಿ ಪೋನ್​ ಕಾಲ್​ ಕಟ್​ ಮಾಡುತ್ತಾರೆ.

ಇತ್ತ ಈ ಆಡಿಯೋ ವೈರಲ್​ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮಿತ್​ ಕುಮಾರ್​ ಆನಂದ್​ ರಾಮ್​ಕೃಪಾಲ್​ ಸಿಂಗ್​ ಅವರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಿದ್ದಾರೆ. ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್‌ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net