ತನ್ನಿಬ್ಬರು ಮಕ್ಕಳೊಂದಿಗೆ ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಮಹಿಳೆ! ಆಕೆ ಕೊಟ್ಟ ಕಾರಣ ಹೀಗಿದೆ….

Muslim Woman
Published on

ಭೋಪಾಲ್​: ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪತಿಯ ದೌರ್ಜನ್ಯದಿಂದ ಬೆಸತ್ತು ತನ್ನಿಬ್ಬರು ಮಕ್ಕಳೊಂದಿಗೆ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಹಿಂದು ಧರ್ಮದ ಮೇಲಿನ ತನ್ನ ಅಚಲ ನಂಬಿಕೆಯನ್ನು ತೋರಿಸಲು ಮಹಿಳೆ ತನ್ನ ಪುತ್ರರಿಗೆ ಲವ-ಕುಶ ಎಂದು ಹೆಸರಿಟ್ಟಿದ್ದಾರೆ. ಮೆಹನಾಜ್ ಎಂದಿದ್ದ ತನ್ನ ಹೆಸರನ್ನು ಮೀನಾಕ್ಷಿ ಎಂದು ಬದಲಾಯಿಸಿಕೊಂಡಿದ್ದಾರೆ. ಹಿಂದು ಸಂಪ್ರದಾಯದಲ್ಲಿ ಮಹಿಳೆಯರಿಗೆ ಇರುವ ಗೌರವವನ್ನು ಗಮನದಲ್ಲಿಟ್ಟುಕೊಂಡು ಹಿಂದು ಧರ್ಮಕ್ಕೆ ಸೇರಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಧಮ್ನಾರ್ ಗ್ರಾಮದ ನಿವಾಸಿಯಾಗಿರುವ ಮೆಹನಾಜ್ (30) ತನ್ನ 12 ಮತ್ತು 11 ವರ್ಷದ ಇಬ್ಬರು ಪುತ್ರರೊಂದಿಗೆ ಬುಧವಾರ ಮಂದಸೌರ್‌ನ ಗಾಯತ್ರಿ ದೇವಸ್ಥಾನದಲ್ಲಿ ಹಿಂದು ಧರ್ಮಕ್ಕೆ ಮತಾಂತರಗೊಂಡರು. ಸುಮಾರು ಒಂದೂವರೆ ಗಂಟೆಗಳ ಕಾಲ ಮಂತ್ರಗಳನ್ನು ಜಪಿಸಿದ ನಂತರ ಮೆಹನಾಜ್​ ತಮ್ಮ ಮಕ್ಕಳಿಗೆ ಹಿಂದು ಹೆಸರನ್ನು ಇಟ್ಟರು.

ಸನಾತನ ಹಿಂದು ಧರ್ಮದಲ್ಲಿ ಮಹಿಳೆಯರಿಗೆ ನೀಡುವ ಗೌರವವನ್ನು ಕಂಡಿದ್ದೇನೆ. ಯೂಟ್ಯೂಬ್ ಹಾಗೂ ಇನ್ನಿತರ ವೇದಿಕೆಗಳಲ್ಲಿ  ಬಗ್ಗೆ ನೋಡಿ ತಿಳಿದಿದ್ದೇನೆ. ಇದಾದ ಬಳಿಕ ಹಿಂದು ಸಂಘಟನೆಯವರನ್ನು ಸಂಪರ್ಕಿಸಿ ಸನಾತನ ಧರ್ಮಕ್ಕೆ ಸೇರಿದ್ದಾಗಿ ಮೆಹನಾಜ್ (ಮೀನಾಕ್ಷಿ) ಹೇಳಿದ್ದಾರೆ.

ಮೆಹನಾಜ್ 15 ವರ್ಷಗಳ ಹಿಂದೆ ಧನ್ಮಾರ್‌ನ ಇರ್ಫಾನ್ ಖಾನ್ ಎಂಬುವರನ್ನು ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು, ಆದರೆ ನಂತರ ತನ್ನ ಪತಿ ಮತ್ತು ಅತ್ತೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತು. ಸಣ್ಣಪುಟ್ಟ ವಿಷಯಗಳಿಗೂ ಜಗಳ ಆಡಲು ಶುರು ಮಾಡಿದರು. ಈ ಬಗ್ಗೆ ಆಕೆ ತನ್ನ ತಂದೆಗೆ ತಿಳಿಸಿದ್ದು, ಇದು ನಿಮ್ಮ ಕುಟುಂಬದ ವಿಷಯ ಎಂದು ಹೇಳಿ ಕೈತೊಳೆದುಕೊಂಡರು ಎಂದು ಮೆಹನಾಜ್​ ತನ್ನ ಅಸಹಾಯಕತೆಯನ್ನು ತೋಡಿಕೊಂಡರು.

ಹಿಂದು ಯುವ ವಾಹಿನಿಯ ರಾಜ್ಯ ಉಸ್ತುವಾರಿ ಚೈತನ್ಯ ಸಿಂಗ್ ರಜಪೂತ್ ಮಾತನಾಡಿ, ಎರಡ್ಮೂರು ತಿಂಗಳ ಹಿಂದೆ ಹಿಂದು ಧರ್ಮಕ್ಕೆ ಮತಾಂತರಗೊಳ್ಳಲು ಮೆಹನಾಜ್ ಅವರು ಸಂಪರ್ಕಿಸಿದ್ದರು. ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಮೆಹನಾಜ್ ತನ್ನ ಇಬ್ಬರು ಪುತ್ರರೊಂದಿಗೆ ಗಾಯತ್ರಿ ಪರಿವಾರ ದೇವಸ್ಥಾನಕ್ಕೆ ಬಂದು ಮತಾಂತರಗೊಂಡಿದ್ದಾರೆ.  ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಕ್ಕೆ ತುಂಬಾ ಸಂತೋಷಪಟ್ಟಿದ್ದಾರೆ. ಇದುವರೆಗೆ 40 ಮಹಿಳೆಯರು, 5 ಪುರುಷರು ಮತ್ತು ಇಬ್ಬರು ಮಕ್ಕಳು ಸಂಪೂರ್ಣವಾಗಿ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರೆಲ್ಲರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net