

ನವದೆಹಲಿ: ಜಗತ್ತು ಬದಲಾದಂತೆ ವ್ಯಕ್ತಿಯ ಅಭಿರುಚಿ ಮತ್ತು ಆಸಕ್ತಿಗಳಲ್ಲಿ ಅನೇಕ ಬದಲಾವಣೆಗಳು ಕೂಡ ಸಂಭವಿಸುತ್ತವೆ. ಇದೀಗ ಹೊಸದೊಂದು ರೀತಿಯ ಲೈಂಗಿಕ ಸಂಬಂಧವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಸಿಂಬಯೋಸೆಕ್ಸುವಾಲಿಟಿ ಎಂದು ಕರೆಯಲ್ಪಡುವ ಈ ಹೊಸ ಲೈಂಗಿಕ ಸಂಬಂಧವೂ ಈಗ ಸಾಮಾನ್ಯವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.
ಏನಿದು ಸಿಂಬಯೋಸೆಕ್ಸುವಾಲಿಟಿ?
ಅಮೆರಿಕದ ಸಿಯಾಟಲ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಹೊಸ ಅಧ್ಯಯನದಲ್ಲಿ ಈ ಸಿಂಬಯೋಸೆಕ್ಸುವಾಲಿಟಿ ಕಂಡುಹಿಡಿಯಲಾಗಿದೆ. ಅನೇಕರು ಪ್ರೀತಿಯನ್ನು ವ್ಯಕ್ತಿಯ ಆಕರ್ಷಣೆಯಾಗಿ ನೋಡುತ್ತಾರೆ. ಆದರೆ, ಅದಕ್ಕೂ ಮಿಗಿಲಾದ ಇನ್ನೊಂದು ಅಂಶವಿದೆ ಎನ್ನುತ್ತಾರೆ ಸಂಶೋಧಕರು. ಸಿಂಬಯೋಸೆಕ್ಸುವಾಲಿಟಿ ಎನ್ನುವುದು ಒಬ್ಬ ವ್ಯಕ್ತಿಗಿಂತ ಇಬ್ಬರ ನಡುವಿನ ಸಂಬಂಧದ ಆಕರ್ಷಣೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಉದಾಹರಣೆಗೆ ಸಿಂಬಯೋಸೆಕ್ಸುವಾಲಿಟಿ ವ್ಯಕ್ತಿಯು ದಂಪತಿ ನಡುವಿನ ನಿಕಟತೆ, ಸಾಮರಸ್ಯ ಮತ್ತು ಸಂಪರ್ಕಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ. ಇಲ್ಲಿ ಆಕರ್ಷಣೆಯು ಕೇವಲ ವ್ಯಕ್ತಿಯಲ್ಲ, ಬದಲಾಗಿ ಒಟ್ಟಿಗೆ ರಚಿಸಿಕೊಂಡಿರುವ ಅನ್ಯೋನ್ಯ ಸಂಬಂಧ. ಈ ಆಕರ್ಷಣೆಯು ಕೇವಲ ದೈಹಿಕ ಅಥವಾ ಸೌಂದರ್ಯವಲ್ಲ, ದಂಪತಿ ನಡುವಿನ ಅನ್ಯೋನ್ಯ ಸಂಬಂಧದ ಗುಣಗಳಲ್ಲಿ ಆಳವಾಗಿ ಬೇರೂರಿದೆ ಎನ್ನುತ್ತಾರೆ ಸಂಶೋಧಕರು.
ಕೆಲವು ಜನರು ಸಾಮರಸ್ಯದಿಂದ ಬಾಳುವ ದಂಪತಿಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್ನಲ್ಲಿ ಪ್ರಕಟವಾದ ವರದಿಯಲ್ಲಿ ಡಾ. ಸ್ಯಾಲಿ ಜಾನ್ಸನ್ ಎಂಬುವರು ವಿವರಿಸಿದ್ದಾರೆ. ಆದರೆ, ಈ ಸಂಬಂಧದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎಂದಿದ್ದಾರೆ.
ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಈ ಅಧ್ಯಯನದಲ್ಲಿ ಭಾಗವಹಿಸಿದ 373 ಜನರಲ್ಲಿ 145 ಜನರು ವ್ಯಕ್ತಿಗಳಿಗಿಂತ ದಂಪತಿಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಅವರು ತಮ್ಮ ಪಾಲುದಾರರಿಂದ ಅನ್ಯೋನ್ಯತೆ, ಕಾಳಜಿ ಮತ್ತು ಗಮನವನ್ನು ಬಯಸುತ್ತಾರೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ದಂಪತಿಯ ಪ್ರೀತಿಯನ್ನು ಕಂಡರೆ ಅಸೂಯೆ ಪಡುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಸಂಶೋಧಕರು.
ವಯಸ್ಸು, ಜನಾಂಗ ಅಥವಾ ಯಾವುದೇ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಈ ಸಿಂಬಯೋಸೆಕ್ಸುವಾಲಿಟಿ ಕಂಡುಬರುತ್ತದೆ. ಏಪ್ರಿಲ್ನಲ್ಲಿ ತೆರೆಕಂಡ ‘ಚಾಲೆಂಜರ್ಸ್’ ಸಿನಿಮಾದಲ್ಲಿಯೂ ಸಿಂಬಯೋಸೆಕ್ಸುವಾಲಿಟಿ ಬಗ್ಗೆ ಮಾತನಾಡಲಾಗಿದೆ. ಸಿಂಬಯೋಸೆಕ್ಸುವಾಲಿಟಿಯಲ್ಲಿ ಕೆಲವರು ತಮ್ಮ ಸಂಗಾತಿಯೊಂದಿಗೆ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಈ ಒಂದು ಸಂಬಂಧದಿಂದ ಕೆಲವು ದಿನಗಳ ನಂತರ ಮೂರನೇ ವ್ಯಕ್ತಿಯನ್ನು ತೊಡೆದುಹಾಕಲು ಸಾಧ್ಯವಿದೆ ಎಂದು ಸಂಶೋಧಕರು ಹೇಳುತ್ತಾರೆ. (ಏಜೆನ್ಸೀಸ್)