ಬೆಂಗಳೂರು: ಅವನನ್ನ ಬಿಡಬೇಡಿ… ಸರಿಯಾಗಿ ಪಾಠ ಕಲಿಸಿ… ಇವನಂಥವರು ಈ ಭೂಮಿ ಮೇಲೆಯೇ ಇರಬಾರದು… ಇದಿಷ್ಟು ನಟ ದರ್ಶನ್ ಗರ್ಲ್ಫ್ರೆಂಡ್ ಪವಿತ್ರಾ ಗೌಡ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮೇಲೆ ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆ ನಡೆದಂತಹ ಸಂದರ್ಭದಲ್ಲಿ ಹೇಳಿರುವ ಮಾತುಗಳೆಂದು ನಿನ್ನೆ (ಸೆ.04) ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿ ಕೊಲೆಗೆ ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಚಾರ್ಜ್ಶೀಟ್ನಲ್ಲಿ ಪ್ರಮುಖವಾಗಿ ಹೈಲೆಟ್ ಮಾಡಲಾಗಿದೆ. ರೇಣುಕಾಸ್ವಾಮಿ ತನಗೆ ಅಶ್ಲೀಲ ಮಸೇಜ್ ಮಾಡಿದ ಎನ್ನುವ ಕಾರಣಕ್ಕೆ ತನ್ನ ಬಾಯ್ಫ್ರೆಂಡ್ ಹಾಗೂ ಎ2 ಆರೋಪಿಯಾಗಿರುವ ನಟ ದರ್ಶನ್ಗೆ ಈ ವಿಚಾರವನ್ನು ತಿಳಿಸಿ, ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿ, ಕೊಲೆ ಮಾಡಿಸುವ ಮಟ್ಟಕ್ಕೆ ಕುಮ್ಮಕ್ಕು ನೀಡಿದ್ದು ಎ1 ಆರೋಪಿ ಪವಿತ್ರಾ ಗೌಡ ಎಂಬುದು ಚಾರ್ಜ್ಶೀಟ್ನಲ್ಲಿ ಬಯಲಾಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ನೋಡುತ್ತಿದ್ದಂತೆ ಕೆರಳಿ ಕೆಂಡವಾದ ಪವಿತ್ರಾ, ಅವನನ್ನ ಬಿಡಬೇಡಿ… ಸರಿಯಾಗಿ ಪಾಠ ಕಲಿಸಿ… ಇವನಂಥವರು ಈ ಭೂಮಿ ಮೇಲೆಯೇ ಇರಬಾರದು ಎಂದು ಕೂಗಾಡಿದ್ದಾಳೆ. ಅಷ್ಟೇ ಅಲ್ಲದೆ, ಡಿ-ಗ್ಯಾಂಗ್ನಿಂದ ಮೊದಲೇ ಹೊಡೆತ ತಿಂದು ನಿತ್ರಾಣಗೊಂಡಿದ್ದ ರೇಣುಕಾಸ್ವಾಮಿ ಮೇಲೆ ತನ್ನ ಚಪ್ಪಲಿಯಿಂದ ಥಳಿಸಿದಳು ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ರೇಣುಕಾಸ್ವಾಮಿ ಮುಖದಲ್ಲಿದ್ದ ರಕ್ತದ ಕಲೆ ಪವಿತ್ರಾ ಗೌಡಳ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಪವಿತ್ರಾಳ ಮಾತಿನಿಂದ ಪ್ರಚೋದನೆಗೊಂಡ ದರ್ಶನ್ ಮತ್ತು ಅವನ ಸಹಚರರು ಮೃಗಗಳಂತೆ ರೇಣುಕಾಸ್ವಾಮಿ ಮೇಲೆರಗಿ ಬರ್ಬರವಾಗಿ ಕೊಂದಿದ್ದಾರೆ ಎಂದು ಕೋರ್ಟ್ಗೆ ಸಲ್ಲಿಸಿರುವ ದಾಖಲೆಯಲ್ಲಿ ತನಿಖಾಧಿಕಾರಿಗಳು ಒತ್ತಿ ಹೇಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿರುವ ಸಂಪೂರ್ಣ ಮೆಸೇಜ್ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ‘Goutham_KS_1990’ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ, ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ಗಳನ್ನು ಮಾಡಿದ್ದ ಎಂದು ತಿಳಿದುಬಂದಿದೆ. ಕಿಡ್ನಾಪ್ ಆಗುವ 8 ದಿನಗಳಿಗೂ ಮುಂಚೆ ಪವಿತ್ರಾ ಗೌಡಳ pavitragowda777_official ಹೆಸರಿನ ಅಧಿಕೃತ ಇನ್ಸ್ಟಾಗ್ರಾಂ ಖಾತೆಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ದರ್ಶನ್ರನ್ನು ಬಿಟ್ಟು ತನ್ನ ಜೊತೆ ಇರುವಂತೆ ಪಟ್ಟು ಹಿಡಿದಿದ್ದ. ಅಲ್ಲದೆ, ಪವಿತ್ರಾಳ ದೇಹದ ಬಗ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡು, ಆಕೆಯನ್ನು ಲೈಂಗಿಕ ಬಯಕೆ ಈಡೇರಿಸುವಂತೆ ಆಹ್ವಾನಿಸಿದ್ದ. ಇದಿಷ್ಟೇ ಅಲ್ಲದೆ, ತನ್ನ ಮರ್ಮಾಂಗದ ಫೋಟೋ ಸೇರಿದಂತೆ ತನ್ನ ಅನೇಕ ಫೋಟೋಗಳನ್ನು ಪವಿತ್ರಾಗೆ ಕಳುಹಿಸಿದ್ದ ಎಂದು ಚಾರ್ಜ್ಶೀಟ್ ಉಲ್ಲೇಖಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೇಣುಕಾಸ್ವಾಮಿಯ ಈ ವರ್ತನೆ ಪವಿತ್ರಾ ಗೌಡಳ ಕೋಪಕ್ಕೆ ಕಾರಣವಾಯಿತು. ಇದಾದ ಬಳಿಕ ಆಕೆ ತನ್ನ ಮ್ಯಾನೇಜರ್ ಪವನ್ಗೆ ಈ ಬಗ್ಗೆ ತಿಳಿಸಿದಳು. ಬಳಿಕ ಪವನ್ ಅಪರಿಚಿತ ಮಹಿಳೆಯ ಹೆಸರಿನಲ್ಲಿ ರೇಣುಕಾಸ್ವಾಮಿಗೆ ಮಸೇಜ್ ಮಾಡಿ, ಆತನಿಂದ ಎಲ್ಲ ಮಾಹಿತಿ ಪಡೆದುಕೊಂಡನು. ಇದಾದ ಬಳಿಕ ಪವನ್, ಈ ಸಂಗತಿಯನ್ನು ನಟ ದರ್ಶನ್ಗೆ ತಿಳಿಸಿದ್ದಾನೆ. ನಂತರ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರಗೆ ತಿಳಿಸಿದ್ದು, ಆತ ಒಂದು ತಂಡವನ್ನು ಕಟ್ಟಿಕೊಂಡು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಆರ್ಆರ್ ನಗರದ ಪಟ್ಟಣಗೆರೆ ಶೆಡ್ಗೆ ಕರೆತಂದಿದ್ದಾನೆ. ಇದೇ ಸಂದರ್ಭದಲ್ಲಿ ಆರ್ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡುತ್ತಿದ್ದ ನಟ ದರ್ಶನ್ಗೆ ಈ ವಿಚಾರವನ್ನು ತಿಳಿಸಲಾಗಿದೆ. ತಕ್ಷಣ ರೆಸ್ಟೋರೆಂಟ್ನಿಂದ ಹೊರಟ ದರ್ಶನ್, ಪವಿತ್ರಾ ಗೌಡ ಮನೆಗೆ ತೆರಳಿ, ಆಕೆಯನ್ನು ತನ್ನ ಜತೆ ಕರೆದುಕೊಂಡು ಪಟ್ಟಣಗೆರೆ ಶೆಡ್ ಬಳಿ ಬಂದಿದ್ದಾರೆ. ಇತ್ತ ರಾಘವೇಂದ್ರ, ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾತ್ರ ಮಾಡಿರಲಿಲ್ಲ, ಆತನ ಮೇಲೆ ಹಲ್ಲೆ ಸಹ ಮಾಡಿದ್ದರು. ಪಟ್ಟಣಗೆರೆ ಶೆಡ್ನಲ್ಲಿ ತೀವ್ರ ಹಲ್ಲೆ ಮಾಡಿದ ಬಳಿಕ ಮೃತಪಟ್ಟ ರೇಣುಕಾಸ್ವಾಮಿಯನ್ನು ಕಾಮಾಕ್ಷಿಪಾಳ್ಯ ಬಳಿಯ ಮೋರಿಯಲ್ಲಿ ಎಸೆಯಲಾಯಿತು ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಸಾಕ್ಷಿಗಳು
ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಲು ಬಳಸಿದ ಸಾಧನವು ಪೋರ್ಟಬಲ್ ಮೆಗ್ಗರ್ ಆಗಿದ್ದು, ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳಾದ ನಿಖಿಲ್ ನಾಯ್ಕ್, ಕೇಶವಮೂರ್ತಿ ಮತ್ತು ಕಾರ್ತಿಕ್ ಎಂಬುವವರು ಕೊಲೆ ಆರೋಪವನ್ನು ತಮ್ಮ ಮೇಲೆ ಹಾಕಿಕೊಂಡು ಪೊಲೀಸರ ಮುಂದೆ ಶರಣಾಗತಿಯ ನಾಟಕವಾಡಿದ್ದರು. ಅವರ ಮೇಲೆ ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪವನ್ನು ಹೊರಿಸಲಾಗಿದೆ. ಉಳಿದ 14 ಆರೋಪಿಗಳ ಮೇಲೆ ಅಪಹರಣ, ಕೊಲೆ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪವಿದೆ. ಎಲ್ಲ 17 ಆರೋಪಿಗಳು ಬೇರೆ ಬೇರೆ ಜೈಲುಗಳಲ್ಲಿದ್ದಾರೆ. ಮೂವರನ್ನು ಪ್ರತ್ಯಕ್ಷದರ್ಶಿಗಳು ಎಂದು ಗುರುತಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ 164 ರ ಅಡಿಯಲ್ಲಿ ಸುಮಾರು 27 ಜನರು ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಸಿಆರ್‌ಪಿಸಿ 161 ರ ಅಡಿಯಲ್ಲಿ ಸುಮಾರು 97 ಜನರ ಹೇಳಿಕೆಗಳನ್ನು ಪೊಲೀಸರ ಮುಂದೆ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ವರದಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ತಹಸೀಲ್ದಾರ್, ವೈದ್ಯರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಎಂಟು ಸರ್ಕಾರಿ ಅಧಿಕಾರಿಗಳು ಮತ್ತು 56 ಪೊಲೀಸ್ ಸಿಬ್ಬಂದಿ ಮತ್ತು 59 ಮಹಜರ್ (ಸ್ಥಳ ತಪಾಸಣೆ) ಸಾಕ್ಷಿಗಳ ಹೇಳಿಕೆಗಳನ್ನು ಸಲ್ಲಿಸಲಾಗಿದೆ.
ಎಫ್‌ಎಸ್‌ಎಲ್‌ನಿಂದ ಆರೋಪಿಯ ಮೊಬೈಲ್ ಫೋನ್ ಡೇಟಾ, ದರ್ಶನ್ ಮತ್ತು ಗ್ಯಾಂಗ್ ಪಾರ್ಕಿಂಗ್ ಯಾರ್ಡ್ ಪ್ರವೇಶಿಸುವ ಮತ್ತು ನಿರ್ಗಮಿಸುವ ಸಿಸಿಟಿವಿ ದೃಶ್ಯಗಳು, ಕರೆ ವಿವರಗಳ ದಾಖಲೆಗಳು (ಸಿಡಿಆರ್), ಮೊಬೈಲ್ ಟವರ್ ಲೊಕೇಶನ್, ವಾಟ್ಸ್ಆ್ಯಪ್ ಸಂದೇಶಗಳು ಮತ್ತು ಹಲ್ಲೆಯ ಫೋಟೋಗಳು ಇತರ ದಾಖಲೆಗಳಲ್ಲಿ ಸೇರಿವೆ. ದರ್ಶನ್ ಮತ್ತು ಇತರ ಆರೋಪಿಗಳ ಮನೆಗಳಿಂದ ವಶಪಡಿಸಿಕೊಂಡ ಹಣವನ್ನು ಸಹ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಆಯುಕ್ತ (ವಿಜಯನಗರ ಉಪವಿಭಾಗ) ಚಂದನ್ ಕುಮಾರ್ ನೇತೃತ್ವದಲ್ಲಿ ನಡೆಸಲಾಗಿದೆ. ಕಾಮಾಕ್ಷಿಪಾಳ್ಯ, ಸಿಕೆ ಅಚ್ಚುಕಟ್ಟು, ಕೆಂಗೇರಿ ಹಾಗೂ ಗೋವಿಂದರಾಜನಗರ, ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಕೂಡ ತನಿಖಾ ತಂಡದಲ್ಲಿದ್ದರು. ಹೈದರಾಬಾದ್‌ನ ಸಿಎಫ್ಎಸ್ಎಲ್ನಿಂದ ಕೆಲವು ವರದಿಗಳು ಬಾಕಿ ಉಳಿದಿದ್ದು, ಸಿಆರ್‌ಪಿಸಿ 173 (8) ಅಡಿಯಲ್ಲಿ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ವಿಜಯಲಕ್ಷ್ಮೀ ರೀತಿ ನಾನೂ ದರ್ಶನ್ರನ್ನು ಮದ್ವೆ ಆಗ್ತೀನಿ: ಬಳ್ಳಾರಿ ಜೈಲಿನ ಮುಂದೆ ಅಭಿಮಾನಿಯ ಹೈಡ್ರಾಮ