ಸರಣಿ ಉಪಸೋಲು, ದಳಪತಿಗಳಲ್ಲಿ ದಿಗಿಲು..

HDK 18 Feb 20
Published on

| ವಿಲಾಸ ಮೇಲಗಿರಿ ಬೆಂಗಳೂರು

ಹಾನಗಲ್ ಹಾಗೂ ಸಿಂದಗಿ ಫಲಿತಾಂಸದಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ ದಾಖಲಿಸಿದೆ. 2018ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆ ತರುವಾಯ ನಡೆದ ಎಲ್ಲ ಉಪ ಚುನಾವಣೆಗಳಲ್ಲಿ ಜೆಡಿಎಸ್ ಕಳಪೆ ಫಲಿತಾಂಶ ಕಂಡಿದೆ. ಲೋಕಸಭೆ ಚುನಾವಣೆಯಲ್ಲಂತೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಆಗ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪರಾಭವ ಪಕ್ಷವನ್ನು ತಲ್ಲಣಗೊಳಿಸಿತ್ತು. ಇದೀಗ ಉಪ ಸಮರದಲ್ಲಿ ಠೇವಣಿ ಕಳೆದುಕೊಂಡು ನೆಲ ಕಚ್ಚಿದೆ. ಈ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಜೆಡಿಎಸ್ ಮಾಡಿದ ತಂತ್ರಗಳೆಲ್ಲವೂ ವಿಫಲವಾಗಿವೆ. ಅಲ್ಲದೆ, ವಿಧಾನಸಭೆಯಲ್ಲಿ ಒಂದು ಸ್ಥಾನ ಕಳೆದುಕೊಂಡಿದೆ. ಎರಡೂ ಕಡೆ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿ ಜೆಡಿಎಸ್ ಕೈಕೈ ಹಿಸುಕಿಕೊಂಡಿದೆ.

ಸಿಂಧಗಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಹರಿಸಿದ ಬೆವರಿಗೆ, ಅಭ್ಯರ್ಥಿ ನಾಜಿಯಾ ಶಕೀಲ್ ಸುರಿಸಿದ ಕಣ್ಣೀರಿಗೆ ಮತದಾರ ಕವಡೆ ಕಿಮ್ಮತ್ತೂ ಕೊಟ್ಟಿಲ್ಲ. ಹಾನಗಲ್ ಸೋತರೂ ಸಿಂದಗಿಯಲ್ಲಿ ಗೆಲ್ಲಬಹುದೆಂಬ ಜೆಡಿಎಸ್ ನಾಯಕರ ಕನಸು ನುಚ್ಚುನೂರಾಗಿದೆ. ಉತ್ತರ ಕರ್ನಾಟಕಕ್ಕೆ ಜೆಡಿಎಸ್ ನೀಡಿದ ಕೊಡುಗೆಯನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡ ದೇವೇಗೌಡ ಮತ್ತು ಕುಮಾರಸ್ವಾಮಿ 8-10 ದಿನ ಕ್ಷೇತ್ರದಲ್ಲಿ ನಡೆಸಿದ ಪ್ರಚಾರ ಫಲ ನೀಡಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅದರಲ್ಲೂ ವಿಶೇಷವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಾತಿನ ಹಾದಿ ರಂಪ ಜೆಡಿಎಸ್​ಗೆ ಮಗ್ಗಲು ಮುಳ್ಳಾಗಿ ಪರಿಣಮಿಸಿತು. ಈ ಮಧ್ಯೆ ಜೆಡಿಎಸ್, ಬಿಜೆಪಿಯ ಬಿ ಟೀಮ್ ಎಂದು ಸಿದ್ದರಾಮಯ್ಯ ಮಾಡಿದ ಆರೋಪ ಜೆಡಿಎಸ್ ಕತ್ತು ಹಿಸುಕಿದೆ.

ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದು ಕಾಂಗ್ರೆಸ್ ನಾಯಕರು ನಡೆಸಿದ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ಉತ್ತರ. ಈ ಫಲಿತಾಂಶದಿಂದ ಅಧೀರನೂ ಆಗಿಲ್ಲ, ಆತಂಕವೂ ಇಲ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ ಮೇಲೆ ಕೇಂದ್ರೀಕೃತ.

| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net