

ನವದೆಹಲಿ: ಅಗ್ನಿಪಥ್ ಯೋಜನೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆ ಮತ್ತು ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಸೇನಾ ನೇಮಕಾತಿ ಕಾರ್ಯಕ್ರಮವನ್ನು ರದ್ದುಪಡಿಸಲಾಗುವುದು ಎಂದು ವಾಗ್ದಾನ ನೀಡಿದೆ.
ಅಗ್ನಿಪಥ್ ಯೋಜನೆಯು ಇನ್ನೇನು ಪ್ರಧಾನ ಮಂತ್ರಿ ಸ್ಥಾನದಿಂದ ಹೊರಹೋಗುವ ಮೋದಿ ಅವರ ಕೊಡುಗೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ. "ಈ ಯೋಜನೆ ರಾಷ್ಟ್ರೀಯ ಭದ್ರತೆ ಮತ್ತು ಯುವಜನರ ಭವಿಷ್ಯದೊಂದಿಗೆ ಆಟವಾಡುತ್ತಿದೆ. ಅಗ್ನಿಪಥ್‌ಗಿಂತ ಮೊದಲು, ಸುಮಾರು 75,000 ಯುವಕರನ್ನು ಸಶಸ್ತ್ರ ಪಡೆಗಳಿಗೆ (ವಾರ್ಷಿಕವಾಗಿ) ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ಅದು ನಾಲ್ಕನೇ ಒಂದು ಭಾಗದಷ್ಟು ಕಡಿಮೆಯಾಗಿದೆ" ಎಂದು ರಮೇಶ್ ತಮ್ಮ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದ ವೀಡಿಯೋದಲ್ಲಿ ಹೇಳಿದ್ದಾರೆ.
“ಭೂ ಸೇನಾ, ನೌಕಾಪಡೆ ಮತ್ತು ವಾಯುಪಡೆಯ ಮೂವರು ಮುಖ್ಯಸ್ಥರು ಅಗ್ನಿಪಥ್ ಅನ್ನು ವಿರೋಧಿಸಿದ್ದರು ಎಂಬುದನ್ನು ನಾವಿಲ್ಲಿ ನೆನಪಿನಲ್ಲಿಡಬೇಕು. ಮಾಜಿ ಸೇನಾ ಮುಖ್ಯಸ್ಥ (ಜನರಲ್ ಮನೋಜ್ ಮುಕುಂದ್) ನರವಾಣೆ ತಮ್ಮ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಅಗ್ನಿಪಥ್ ಸ್ಕೀಮ್ನ ತಂದಿದ್ದು ಏಕೆ? ಮತ್ತು ನಮ್ಮ ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಲು ಕಾರಣವೇನು ಎಂಬುದನ್ನು ಜೂನ್ 4ರಂದು ನಿರ್ಗಮಿಸುವ ಪ್ರಧಾನಿಗಳೇ ತಿಳಿಸಲಿದ್ದಾರೆ" ಎಂದು ರಮೇಶ್ ಲೇವಡಿ ಮಾಡಿದ್ದಾರೆ,(ಏಜೆನ್ಸೀಸ್).