ಶಶಿ ತರೂರ್​ ಹೇಳಿಕೆ ಎಫೆಕ್ಟ್​!? 'ಕೈ' ನಾಯಕರಿಗೆ ಹೈಕಮಾಂಡ್​ ಪ್ರಮುಖ ಸೂಚನೆ | Congress Pahalgam Attack

ವಿಜಯವಾಣಿ (96)
Published on

Congress: ಕಾಶ್ಮೀರದ ಪಹಲ್ಗಾಮ್ ದಾಳಿಯ ಕುರಿತು ಪಕ್ಷದ ಶಿಸ್ತು ಮೀರಿ ಯಾರೊಬ್ಬರು ಮಾತನಾಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ತನ್ನ ನಾಯಕರಿಗೆ ಪ್ರಮುಖ ಸೂಚನೆಗಳನ್ನು ನೀಡಿದೆ. ಉಗ್ರರ ಕ್ರೌರ್ಯ ಕುರಿತು ಕೆಲವು ಕಾಂಗ್ರೆಸ್ ನಾಯಕರು ಇತ್ತೀಚೆಗೆ ನೀಡಿದ ಹೇಳಿಕೆಗಳು ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್​ ಮಾಡಲಿದೆ ಎಂಬುದನ್ನು ಅರಿತ ಹಿರಿಯರು, ಕಠಿಣ ಸಂದರ್ಭದಲ್ಲಿ ಮುಖ್ಯ ಸೂಚನೆಗಳನ್ನು ನೀಡಿದ್ದಾರೆ.

ಏಪ್ರಿಲ್ 22ರಂದು ಮಧ್ಯಾಹ್ನ 2.30ರ ಸುಮಾರಿಗೆ, ಸೇನಾ ಸಮವಸ್ತ್ರ ಧರಿಸಿ ಪ್ರವಾಸಿಗರ ಬಳಿ ಬಂದ ಐವರು ಉಗ್ರರು ಪಹಲ್ಗಾಮ್‌ನ ಬೈಸರನ್ ಕಣಿವೆಯ ಪ್ರವಾಸಿ ಸ್ಥಳದಲ್ಲಿ ಅಮಾಯಕರನ್ನು ಗುಂಡಿಟ್ಟು ಹತ್ಯೆಗೈದರು. ಉಗ್ರರ ಭೀಕರ ಗುಂಡಿನ ದಾಳಿಗೆ 26 ಪ್ರವಾಸಿಗರು ಸ್ಥಳದಲ್ಲೇ ಪ್ರಾಣಬಿಟ್ಟರು. ಈ ವಿಚಾರ ದೇಶದ ಕಾಂಗ್ರೆಸ್​ ನಾಯಕರಲ್ಲಿ ಭಿನ್ನ ಹೇಳಿಕೆಗಳಿಗೆ ಕಾರಣವಾಗಿದೆ. ಈ ಅನುಕ್ರಮದಲ್ಲಿ, ಪಕ್ಷದ ನಾಯಕರ ನಡುವೆ ವಾಗ್ವಾದ ಭುಗಿಲೆದ್ದಿದೆ.

ಪಹಲ್ಗಾಮ್ ದಾಳಿಯ ಹಿಂದೆ ಗುಪ್ತಚರ ಸಂಸ್ಥೆಗಳ ವೈಫಲ್ಯವಿರಬಹುದು ಮತ್ತು ಯಾವುದೇ ದೇಶವು ಅಂತಹ ದಾಳಿಗಳನ್ನು 100 ಪ್ರತಿಶತ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್ ಪ್ರತಿಕ್ರಿಯಿಸಿದ್ದರು. ಆದಾಗ್ಯೂ, ಈ ಹೇಳಿಕೆಗಳು ಬಿಜೆಪಿ ಸರ್ಕಾರದ ಪರವಾಗಿವೆ ಎಂದು ಕಾಂಗ್ರೆಸ್‌ನಿಂದ ಆಕ್ಷೇಪಣೆಗಳು ವ್ಯಕ್ತವಾಗಿವೆ. ಈ ಸಂದರ್ಭದಲ್ಲಿ 'ಕೈ' ನಾಯಕ ಉದಿತ್ ರಾಜ್, ಶಶಿ ತರೂರ್‌ಗೆ ತಿರುಗೇಟು ನೀಡಿದ್ದಾರೆ. ತರೂರ್ ಕಾಂಗ್ರೆಸ್‌ನಲ್ಲಿದ್ದಾರೋ ಅಥವಾ ಬಿಜೆಪಿಯಲ್ಲಿದ್ದಾರೋ? ಇಲ್ಲಿ ಅವರು 'ಸೂಪರ್ ಬಿಜೆಪಿ ವ್ಯಕ್ತಿ' ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ನಾಯಕರ ಈ ಹೇಳಿಕೆಗಳನ್ನು ಗಮನಿಸಿದ ಪಕ್ಷದ ರಾಷ್ಟ್ರಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಭವಿಷ್ಯದಲ್ಲಿ ಪಕ್ಷದ ನಾಯಕರು ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆಗಳನ್ನು ನೀಡಲಾಗಿದೆ. ಇದಲ್ಲದೆ, ಪಕ್ಷದ ನಿಲುವಿನಿಂದ ವಿಮುಖವಾಗುವ ಹೇಳಿಕೆಗಳನ್ನು ತಪ್ಪಿಸುವಂತೆ ನಿರ್ದೇಶಿಸಲಾಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net