'ವಿ.ಸೂ - ವಾಟ್ಸಾಪ್ ಯೂನಿವರ್ಸಿಟಿಯ ಪದವಿಯನ್ನು ಪರಿಗಣಿಸುವುದಿಲ್ಲ' ಎಂದು ಕಾಂಗ್ರೆಸ್ ಹೇಳಿದ್ಯಾರಿಗೆ? ಇಲ್ಲಿದೆ ಉತ್ತರ

congress
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವಿನ ಬಹಿರಂಗ ಹೇಳಿಕೆಗಳ ಕಿತ್ತಾಟಕ್ಕಿಂತ ಟ್ವೀಟ್ ಸಮರವೇ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.

ಇತ್ತೀಚೆಗಷ್ಟೇ ತಮ್ಮ ಪಕ್ಷ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಪೂರೈಸುವುದರ ಸಲುವಾಗಿ ಸಭೆ ನಡೆಸಿದ್ದ ಕಾಂಗ್ರೆಸ್, ಸಭೆಯ ಬಳಿಕ 5 ಗ್ಯಾರಂಟಿಗಳನ್ನು ಜನರಿಗೆ ಈಡೇರಿಸುವುದಾಗಿ ಖಚಿತ ಪಡಿಸಿತು. ಈ ವೇಳೆ ಬಿಜೆಪಿ ವಿರುದ್ಧ ವ್ಯಂಗ್ಯವಾಗಿ ಟ್ವೀಟ್(Tweet) ಮಾಡಿದ್ದ ಕಾಂಗ್ರೆಸ್, "ನಳೀನ್ ಕುಮಾರ್ ಕಟೀಲ್ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ! ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ! ಶೋಭಾ ಕರಂದ್ಲಾಜೆ ಅವರೇ, ನಿಮಗೂ ಪ್ರಯಾಣ ಫ್ರೀ! ಸಿ.ಟಿ. ರವಿ ಅವರೇ, ನಿಮ್ಮ ಮನೆಯವರಿಗೂ 2000 ಫ್ರೀ! ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ" ಎಂದು ಟ್ವೀಟ್ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಬಿಜೆಪಿ, "ಖಂಡಿತಾ ಸ್ವಾಮಿ…. ಹಾಗೆಯೇ ನಿರುದ್ಯೋಗ ಭತ್ಯೆಯನ್ನು ಶ್ರೀ ರಾಹುಲ್ ಗಾಂಧಿಯವರಿಗೂ (ಪದವೀಧರರಾಗಿದ್ದರೆ ಮಾತ್ರ) ಹಾಗೂ ಡಾ|| ಯತೀಂದ್ರ ಸಿದ್ದರಾಮಯ್ಯನವರಿಗೂ ದಯಪಾಲಿಸಿ" ಎಂದು ಟ್ವೀಟ್ ಮಾಡಿತ್ತು.

ಬಿಜೆಪಿಯ ಈ ಟ್ವೀಟ್​ಗೆ ತಿರುಗೇಟು ನೀಡಿದ ಕಾಂಗ್ರೆಸ್, "ಬಿಜೆಪಿಯವರೇ ರಾಹುಲ್ ಗಾಂಧಿಯವರು ಪದವೀಧರರಿದ್ದಾರೆ ಸರಿ, ಡಾ.ಯತೀಂದ್ರ ಅವರೂ ನೀವೇ ಹೇಳಿದಂತೆ ಡಾಕ್ಟರ್ ಆಗಿದ್ದಾರೆ. ಸೃತಿ ಇರಾನಿ ಅವರ ಪದವಿ ಹುಡುಕಿ ತನ್ನಿ, ಹಾಗೆಯೇ ವಿಶ್ವದಲ್ಲಿ ಯಾವ ಯುನಿವರ್ಸಿಟಿಯಲ್ಲಿ "ಎಂಟೈರ್ ಪೊಲಿಟಿಕಲ್ ಸೈನ್ಸ್" ಪದವಿ ಇದೆ ಎಂಬುದನ್ನೂ ಹುಡುಕಿ ತನ್ನಿ. ಅವರಿಗೂ ಭತ್ಯೆ ಕೊಡುವ ಬಗ್ಗೆ ಚಿಂತಿಸೋಣ! (ವಿ.ಸೂ - ವಾಟ್ಸಾಪ್ ಯೂನಿವರ್ಸಿಟಿಯ ಪದವಿಯನ್ನು ಪರಿಗಣಿಸುವುದಿಲ್ಲ)" ಎಂದು ಟ್ವೀಟ್ ಮಾಡಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net