

ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪತ್ನಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬೇಗೂರಿನಲ್ಲಿ ನಡೆದಿದೆ.
ಮೃತರನ್ನು ಶಿಲ್ಪಾ(33) ಎಂದು ಗುರುತಿಸಲಾಗಿದ್ದು ಘಟನೆಯೂ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಟೇಲ್ ಲೇಔಟ್ನಲ್ಲಿ ನಡೆದಿದ್ದು ಆತ್ಮಹತ್ಯೆ ಬಗ್ಗೆ ಪೊಲೀಸರು ಮರೆಮಾಚುತ್ತಿದ್ದಾರೆ ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಶಿಲ್ಪಾ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಬಳಿಕ ದಂಪತಿ ನಡುವೆ ಜಾತಿ ವಿಚಾರಕ್ಕೆ ಕಿತ್ತಾಟವಾಗುತ್ತಿತ್ತು. ಪತ್ನಿ ಪರಿಶಿಷ್ಟ ಜಾತಿ(SC)ಗೆ ಸೇರಿದವಳು ಎಂದು ಪತಿ ನಿಂದಿಸುತ್ತಿದ್ದ ಎಂದು ತಿಳಿದು ಬಂದಿದೆ.
ಈ ಸಂಬಂಧ ರಾಜಿ ಪಂಚಾಯಿತಿ ನಡೆಸಿ ಇಬ್ಬರಿಗೂ ಮದುವೆ ಮಾಡಿಸಲಾಗಿತ್ತು. ಜಾತಿನಿಂದನೆ ವಿಚಾರವಾಗಿ ಸಬ್ ಇನ್ಸ್‌ಪೆಕ್ಟರ್ ರಮೇಶ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಚಿಕ್ಕಬಳ್ಳಾಪುರ ಮೂಲದ ಸಬ್ ಇನ್ಸ್ ಪೆಕ್ಟರ್ ರಮೇಶ್ ಪ್ರಪೋರ್ಶನರಿಯಾಗಿ ಕೆಲಸ ನಿರ್ವಹಿಸಿದ್ದರು.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಯುವತಿ ಕುಟುಂಬಸ್ಥರು ನಿನ್ನೆ ರಾತ್ರಿ ನಮ್ಮಗಳ ಜೊತೆ ಫೋನಿನಲ್ಲಿ ಮಾತನಾಡಿ ಖರ್ಚಿಗೆ ಹಣವನ್ನು ಹಾಕಿಸಿಕೊಂಡಿದ್ದರು. ಆದರೆ, ಇಂದು ಬೆಳಗ್ಗೆ ಮಾಲೀಕರು ಕರೆ ಮಾಡಿ ಮಗಳು ಮನೆಯ ಬಾಗಿಲು ತೆರೆಯುತ್ತಿಲ್ಲ ಎಂದು ಮಾಹಿತಿ ನೀಡಿದ್ದರು.
ವಿಷಯ ತಿಳಿದು ನಾವು ಮನೆಗೆ ಭೇಟಿ ನೀಡುವಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ. ನಮ್ಮ ಮಗಳು ಸಾಯುವ ಮನಸ್ಥಿತಿಯವಳಲ್ಲ ಪತಿ ರಮೇಶ್ ಕೊಲೆ ಮಾಡಿರುವ ಅನುಮಾನವಿದೆ. ಕಾನೂನು ರೀತಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಯುವತಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕಾಲೇಜು ಸಮಯದಿಂದಲೂ ರಮೇಶ್ ಹಾಗೂ ಶಿಲ್ಪಾ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಲಿವಿಂಗ್ ಟುಗೇದರ್ ರಿಲೇಷನ್ಶಿಪ್ನಲ್ಲಿದ್ದರು ಎಂದು ತಿಳಿದು ಬಂದಿದ್ದು ರಮೇಶ್ ಶಿಲ್ಪಾರನ್ನು ಮದುವೆಯಾಗಲು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಹಠಬಿಡದ ಯುವತಿ ಶಿಲ್ಪಾ ಪೊಲೀಸರ ಸಮ್ಮುಖದಲ್ಲಿ ರಮೇಶ್ರನ್ನು ರಿಜಿಸ್ಟಾರ್ ವಿವಾಹವಾಗಿದ್ದರು. ವಿವಾಹದ ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂಬ ಕಾರನಕ್ಕೆ ಪತ್ನಿಗೆ ಬೇರೊಂದು ಮನೆಯನ್ನು ಮಾಡಿದ್ದರು. ಆದರೆ, ಜೀವನ ನಡೆಸಲು ಯಾವುದೇ ಆರ್ಥಿಕ ಸಹಾಯ ನೀಡುತ್ತಿರಲಿಲ್ಲ.
ಮದುವೆಯಾದ ಬಳಿಕ ರಮೇಶ್ ಶಿಲ್ಪಾ ಅವರ ಮೇಲೆ ಪದೇ ಪದೇ ಜಾತಿ ನಿಂದನೆ ಮಾಡುತ್ತಿದ್ದರು. ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿದ್ದೀಯ ಸೆಟಲ್ಮೆಂಟ್ ಮಾಡಿಕೊಂಡು ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.