

ಒಡಿಶಾ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ನಡೆದ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸದ್ಯಕ್ಕೆ ಸಾವಿನ ಸಂಖ್ಯೆ 300ಕ್ಕೆ ಏರಿಕೆಯಾಗಿದೆ.
ರೈಲು ಅಪಘಾತದಲ್ಲಿ ಸುಮಾರು 1,000 ಸಾವಿರಕ್ಕೂ ಹೆಚ್ಚು ಪ್ರಯಾಣಿರು ಗಾಯಗೊಂಡಿದ್ದು ಘಟನಾ ಸ್ಥಳಕ್ಕೆ ಇಂದು ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಈ ರೀತಿಯ ಭೀಕರ ರೈಲು ಅಪಘಾತ ಹಿಂದೆಂದೂ ಆಗಿಲ್ಲ ಎಂದು ಹೇಳಲಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದೀಗ ರಕ್ಷಣಾ ಕಾರ್ಯಾಚರಣೆ ಮುಗಿದಿದ್ದು ಹಳಿಯ ರಿಪೇರಿ ಕಾರ್ಯ ಶುರುವಾಗಿದೆ. ಈ ಬಗ್ಗೆ ಖುದ್ದು ರೈಲ್ವೇ ಇಲಾಖೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್)ಯ 3 ಘಟಕ, ಒಡಿಶಾದ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್ಎಫ್)ಯ 4 ಘಟಕ, 15ಕ್ಕೂ ಹೆಚ್ಚು ಅಗ್ನಿಶಾಮಕ ತಂಡ, 30ಕ್ಕೂ ಹೆಚ್ಚು ವೈದ್ಯರು, 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು 60ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳು ಸ್ಥಳದಲ್ಲಿ ಬೀಡುಬಿಟ್ಟಿರುವುದಾಗಿ ಒಡಿಶಾ ಸರ್ಕಾರದ ಮುಖ್ಯಕಾರ್ಯದರ್ಶಿ ಪ್ರದೀಪ್ ಜೆನಾ ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂರಲ್ ಎಕ್ಸ್‌ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದಿತು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರ ಸೂಪರ್ಪಾಸ್ಟ್ ಟ್ರೈನ್ ಹಳಿ ಮೇಲೆ ಬಿದ್ದಿ ಕೋರಮಂಡಲ್ ಎಕ್ಸ್‌ಪ್ರೆಸ್ ಟ್ರೈನ್ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಬ್ ಶರ್ಮ ಅವರು ತಿಳಿಸಿದ್ದಾರೆ.