

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮರು ರಚನೆಗೊಂಡಿದ್ದು, ಹೊಸದಾಗಿ ಕೆಲವರ ಹೆಸರು ಸೇರ್ಪಡೆಗೊಂಡಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯ 79ನೇ ಜನ್ಮದಿನವಾದ ಆ. 20ರಂದು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸಿಡಬ್ಲ್ಯುಸಿಗೆ ಸೇರ್ಪಡೆಗೊಂಡ ಹೆಸರುಗಳನ್ನು ಘೋಷಿಸಿದರು.
ಎಐಸಿಸಿ ಮಾಜಿ ಅಧ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈಗಾಗಲೇ ಸಿಡಬ್ಲ್ಯುಸಿಯಲ್ಲಿದ್ದಾರೆ. ಮಾಜಿ ಪ್ರಧಾನಿ ಆಗಿರುವ ಹಿನ್ನೆಲೆಯಲ್ಲಿ ಡಾ.ಮನಮೋಹನ್ ಸಿಂಗ್ ಕೂಡ ಸಿಡಬ್ಲ್ಯುಸಿಯಲ್ಲಿದ್ದು, ಪ್ರಿಯಾಂಕಾ ಗಾಂಧಿ ವಾಧ್ರಾ ಹೆಸರು ಕೂಡ ಈಗಾಗಲೇ ಇದೆ.
ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಸಿಡಬ್ಲ್ಯುಸಿಗೆ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಸಿಕ್ಕ 6 ತಿಂಗಳ ಬಳಿಕ ಹೊಸ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಒಟ್ಟು 39 ಸದಸ್ಯರಾಗಿದ್ದು, ಸಂಸದ ಶಶಿ ತರೂರ್, ರಾಜಸ್ಥಾನ ಶಾಸಕ ಸಚಿನ್ ಪೈಲಟ್ ಸೇರಿ ಹಲವರನ್ನು ಸೇರಿಸಲಾಗಿದೆ.
ಮಾಜಿ ಸಚಿವ ಪಿ.ಚಿದಂಬರಂ, ಮಾಜಿ ಸಿಎಂ ಅಶೋಕ್ ಚವಾಣ್, ಮಾಜಿ ಸಚಿವ ದಿಗ್ವಿಜಯ್ ಸಿಂಗ್, ಮಾಜಿ ಸ್ಪೀಕರ್ ಮೀರಾ ಕುಮಾರ್, ಮಾಜಿ ಸಿಎಂ ಚರಣ್ಜಿತ್ ಸಿಂಗ್ ಚನ್ನಿ, ಮಾಜಿ ಸಂಸದೆ ದೀಪಾ ದಾಸ್ ಮುನ್ಷಿ, ಸಂಸದ ಗೌರವ್ ಗೊಗೊಯ್, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಯುವ ನಾಯಕರಾದ ಅಲ್ಕಾ ಲಂಬಾ, ಸುಪ್ರಿಯಾ ಶ್ರೀನೇತ್, ಕನ್ಹಯ್ಯ ಕಮಾರ್ ಮುಂತಾದವರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. -ಏಜೆನ್ಸೀಸ್