ಕಾಂಡೋಮ್​ಗೂ​ ಬಂತು ಬರಗಾಲ...!

Condome
Published on

ಕೌಲಾಲಂಪುರ್: ಕರೊನಾ ವೈರಸ್​ ಭೀತಿ ಇಡೀ ವಿಶ್ವಕ್ಕೆ ಬೀಗಮುದ್ರೆಯನ್ನು ಜಡಿಸಿದೆ. ಅನೇಕ ಕಂಪನಿಗಳು ಬಾಗಿಲು ಮುಚ್ಚಿ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಪರಿಣಾಮ ವಸ್ತುಗಳ ಕೊರತೆ ಎದುರಾಗಿದೆ. ಇದಕ್ಕೆ ಕಾಂಡೋಮ್​ ಸಹ ಹೊರತಾಗಿಲ್ಲ.

ಜಾಗತಿಕವಾಗಿ ಅತಿ ಹೆಚ್ಚು ಕಾಂಡೋಮ್​ ಉತ್ಪಾದಿಸುವ ಮಲೇಷಿಯಾದ ಕರೆಕ್ಷ್​ ಬರ್ಹ್ಯಾಡ್​(Karex Bhd) ಕಂಪನಿ, ಲಾಕ್​ಡೌನ್​ನಿಂದಾಗಿ ಮಲೇಷಿಯಾದಲ್ಲಿನ ತನ್ನ ಮೂರು ಕಾರ್ಖಾನೆಯಲ್ಲಿ ಒಂದೇ ಒಂದು ಕಾಂಡೋಮ್​ ಅನ್ನು ಕಳೆದ 10 ದಿನಗಳಿಂದ ಉತ್ಪಾದಿಸಿಲ್ಲ. ಇದರ ಪರಿಣಾಮವಾಗಿ ಈಗಾಗಲೇ 100 ಮಿಲಿಯನ್​ (10 ಕೋಟಿ) ಕಾಂಡೋಮ್​ಗಳ ಕೊರತೆ ಎದುರಾಗಿದೆ.

ಡುರೇಕ್ಸ್​(Durex) ಬ್ರ್ಯಾಂಡ್​​ ಹೆಸರಿನಲ್ಲಿ ಅಂತಾರಾಷ್ಟ್ರೀಯವಾಗಿ ಮಾರಾಟವಾಗುತ್ತಿತ್ತು. ಅಲ್ಲದೆ ಬ್ರಿಟನ್​ನ ಹೆಲ್ತ್​ಕೇರ್​ ಸಿಸ್ಟಮ್​ಗೂ ಪೂರೈಕೆ ಮಾಡಲಾಗುತ್ತಿತ್ತು. ಇದರೊಂದೊಗೆ ವಿಶ್ವಸಂಸ್ಥೆ ಜನಸಂಖ್ಯಾ ನಿಧಿಯು ನೆರವು ಕಾರ್ಯಕ್ರಮಗಳಿಗೆ ವಿತರಣೆ ಮಾಡುತ್ತಿತ್ತು.

ಆಗ್ನೇಯ ಏಷ್ಯಾದ ಮಲೇಷಿಯಾ ಕೂಡ ಕರೊನಾ ಕೆಂಗಣ್ಣಿಗೆ ಗುರಿಯಾಗಿದ್ದು, ಈವರೆಗೂ 26 ಮಂದಿ ಸಾವಿಗೀಡಾಗಿದ್ದಾರೆ. 2,161 ಮಂದಿಗೆ ಸೋಂಕು ತಗುಲಿದ್ದು, ಮತ್ತಷ್ಟು ಮಂದಿಗೆ ಹರಡದಂತೆ ಏಪ್ರಿಲ್​ 14ರವರೆಗೆ ಲಾಕ್​ಡೌನ್​ ಘೋಷಿಸಿದೆ.

ಕರೊನಾ ತವರು ಚೀನಾ ಕೂಡ ಹೆಚ್ಚು ಕಾಂಡೋಮ್​ ಉತ್ಪಾದಿಸುವ ದೇಶವಾಗಿದ್ದು, ಕಳೆದ ಎರಡು ತಿಂಗಳು ಇಲ್ಲಿಯೂ ಕೂಡ ಲಾಕ್​ಡೌನ್​ ಮಾಡಿದ್ದರಿಂದ ಅನೇಕ ಕಂಪನಿಗಳು ಬೀಗಮುದ್ರೆ ಜಡಿದಿದ್ದವು.

ಕಾಂಡೋಮ್​ ಮಾತ್ರವಲ್ಲ, ಮೆಡಿಕಲ್​ ಗ್ಲೋವ್ಸ್​, ಫೇಸ್​ ಮಾಸ್ಕ್​ ಕೂಡ ಕೊರತೆಯಾಗಿದೆ. ಅಲ್ಲದೆ, ಸದ್ಯ ಪ್ರತಿನಿತ್ಯ ಬಳಕೆಯಾಗುತ್ತಿರುವ ಸ್ಯಾನಿಟೈಸರ್​ ಕೊರತೆಯು ಕೂಡ ಲಾಕ್​ಡೌನ್​ನಿಂದಾಗಿ ಎದುರಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net