

ಬ್ಯಾಂಕಾಕ್: ಆಪ್ತರೊಂದಿಗೆ ಸಮಯ ಕಳೆಯಬೇಕೆಂಬ ಬಯಕೆಯಿಂದ 14 ವರ್ಷದ ಹುಡುಗಿಯೊಬ್ಬಳು ತನ್ನ 1 ವರ್ಷದ ಮಗನನ್ನೇ ನೇಣಿಗೇರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ.
ಆರೋಪಿಯನ್ನು ಅರಿಸಾ ಉದ್ಸಾನೀ ಎಂದು ಗುರುತಿಸಲಾಗಿದೆ. ಮಗುವನ್ನು ತವರು ಮನೆಯಲ್ಲೇ ಬಿಟ್ಟಿದ್ದ ಅರಿಸ್ಸಾ ಕಳೆದ ಭಾನುವಾರ ಮಧ್ಯಾಹ್ನ ಈಶಾನ್ಯ ಥಾಯ್ಲೆಂಡ್ನ ಬ್ಯೂಂಗ್ ಕಾನ್ ನಗರದಲ್ಲಿರುವ ತವರು ಮನೆಗೆ ಬಂದಿದ್ದಳು. ತಡವಾಗಿ ಬಂದಿದ್ದಕ್ಕೆ ಪಾಲಕರು ಆಕೆಯ ವಿರುದ್ಧ ಸಿಟ್ಟಾಗಿದ್ದರು. ಬಳಿಕ ತನ್ನ ಮಗನನ್ನು ಕರೆದುಕೊಂಡು ಮನೆಯಿಂದ ಹೊರ ನಡೆದಿದ್ದಳು.
ನೆರೆಯ ಮನೆಯಲ್ಲಿ ಉಳಿಯಲು ಮನವಿ ಮಾಡಿದ್ದ ಆಕೆಗೆ, ಹಿತ್ತಲಿನಲ್ಲಿರುವ ಕ್ಯಾಬಿನ್ನಲ್ಲಿ ಉಳಿದುಕೊಳ್ಳಲು ಅನುವು ಮಾಡಿಕೊಡಲಾಗಿತ್ತು. ತಡರಾತ್ರಿ ಬೈಕ್ ಒಂದು ಬಂದು ಆರೋಪಿ ಅರಿಸ್ಸಾಳನ್ನು ಕರೆದೊಯ್ದಿತ್ತು. ಈ ವೇಳೆ ನೆರೆ ಮನೆಯಾಕೆಗೆ ಬೈಕ್ನಲ್ಲಿ ಬಂದಿದ್ದ ಹುಡುಗನೊಂದಿಗೆ ಓಡಿ ಹೋಗುತ್ತಿರುವುದಾಗಿ ಹೇಳಿದ್ದಳು.
ಕಳೆದ ಬುಧವಾರ ಬೆಳಗ್ಗೆ ನರೆ ಮನೆಯಾಕೆ ಅರಿಸ್ಸಾ ಕ್ಯಾಬಿನ್ ಅನ್ನು ಹುಡುಕಾಡಿದಾಗ ಒಂದು ಪ್ರಾಮ್(ಪಾಲಕರು ಮಗುವನ್ನು ಕರೆದೊಯ್ಯಲು ಬಳಸುವ ಸಾಧನ) ಅಡಿಯಲ್ಲಿ ಇರುವೆಗಳು ತುಂಬಿದ್ದ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ಪರೀಕ್ಷಿಸಿದ ವೈದ್ಯರು ಮಗು ಎರಡು ದಿನಗಳ ಹಿಂದೆಯೇ ಸಾವಿಗೀಡಾಗಿದೆ ಎಂದು ತಿಳಿದುಬಂದಿತ್ತು.
ತದನಂತರದಲ್ಲಿ ಮಗುವಿನ ತಾಯಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹೇಗೆ ಕೊಲೆ ಮಾಡಿದೆ ಎಂಬುದನ್ನು ನಟನೆ ಮೂಲಕವೇ ತೋರಿಸಿದ್ದಾಳೆ. ಟೆಡ್ಡಿ ಬೇರ್ ಅನ್ನು ಬಳಸಿ ಹೇಗೆ ನೇಣುಹಾಕಿ ಮಗುವನ್ನು ಮುಚ್ಚಿಹಾಕಿದ ಬಗೆಯನ್ನು ಅರಿಸ್ಸಾ ವಿವರಿಸಿದಳು.
ಕೊಲೆಗೆ ಕಾರಣ ಬಿಚ್ಚಿಟ್ಟ ಆಕೆ ನಾನು ಮನೆಗೆ ಬರಲು ತಡವಾಗಿದ್ದಕ್ಕೆ ಪಾಲಕರು ಬೈದರು. ಆಪ್ತರೊಂದಿಗೆ ಸಮಯ ಕಳೆಯಲು ಮಗು ಅಡ್ಡವಾಗಿತ್ತು. ಆಪ್ತರೊಂದಿಗೆ ಸಮಯ ಕಳೆಯಲು ಮಗುವನ್ನು ನನ್ನ ತಂದೆ-ತಾಯಿ ಬಳಿ ಬಿಟ್ಟಿದೆ. ಮೂರು ದಿನಗಳವರೆಗೆ ಆಪ್ತರೊಟ್ಟಿಗೆ ಇದ್ದೆ. ಮರಳಿ ಬಂದಾಗ ಪಾಲಕರು ಬೈದರು ಹಾಗೂ ಕಪಾಳಕ್ಕೆ ಬಾರಿಸಿದರು. ಇದು ನನ್ನ ಭಾವನೆಗೆ ಧಕ್ಕೆಯಾಯಿತು. ಬಳಿಕ ನರೆ ಮನೆಯವರ ಕ್ಯಾಬಿನ್ನಲ್ಲಿ ಉಳಿದುಕೊಂಡು ಸುಮಾರು ಎರಡು ಗಂಟೆಯವರೆಗೂ ಕಣ್ಣೀರಿಟ್ಟೆ. ನನ್ನು ಮತ್ತು ಮಗುವಿನ ಜೀವನದೊಂದಿಗೆ ನಾನೇನು ಮಾಡಬೇಕು ಎಂದು ಯೋಚಿಸಿದೆ. ಬಳಿಕ ಒಂದು ನಿರ್ಧಾರಕ್ಕೆ ಬಂದು ಮಗುವಿನ ಜೀವನವನ್ನು ಕೊನೆಗಾಣಿಸಿದೆ. ಮಗುವನ್ನು ಕ್ಯಾಬಿನ್ನಲ್ಲಿ ಒಂದು ಪ್ರಾಮ್ನಲ್ಲಿ ಬಚ್ಚಿಟ್ಟು ಬಳಿಕ ಸ್ನೇಹಿತನನ್ನು ಕರೆದು ಅಲ್ಲಿಂದ ಪರಾರಿಯಾದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಬಂಧಿಯಾಗಿರುವ ಆರೋಪಿ ಜೈಲು ಕಂಬಿ ಎಣಿಸುತ್ತಿದ್ದಾಳೆ. (ಏಜೆನ್ಸೀಸ್)