

ಆಂಧ್ರಪ್ರದೇಶ: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತನ್ನ ಕೆಲಸಗಳಿಂದಲೇ ಹೆಚ್ಚು ಗುರುತಿಸಿಕೊಂಡಿರುವ ಡ್ಯಾನ್ಸ್ ಕೋರಿಯೋಗ್ರಾಫರ್ ಶೈಖ್ ಜಾನಿ ಬಾಷಾ ಅಲಿಯಾಸ್ ಜಾನಿ ಮಾಸ್ಟರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಸದ್ಯ ಟಾಲಿವುಡ್ ಅಂಗಳದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಎಂದೇ ಜನಪ್ರಿಯತೆ ಪಡೆದಿರುವ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ನರಸಿಂಗಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ನಟಿ ಪೂನಂ ಕೌರ್ ಮಾಡಿದ ಆರೋಪಗಳಿಗೆ ಇದೀಗ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಖಡಕ್ ಸಂದೇಶವೊಂದನ್ನು ರವಾನಿಸಿದೆ.
ಜಾನಿ ಮಾಸ್ಟರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಸದ್ಯ ಟಾಲಿವುಡ್ ಮಂದಿಯನ್ನು ತಲೆತಗ್ಗಿಸುವಂತೆ ಮಾಡಿದ್ದು, ಎರಡು ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಚರ್ಚೆಯೇ ಭುಗಿಲೆದ್ದಿದೆ. ಜನಸೇನಾ ಪಕ್ಷದಿಂದ ಜಾನಿಯನ್ನು ಕಿತ್ತುಬಿಸಾಡಿದ ಬೆನ್ನಲ್ಲೇ ನಿನ್ನೆ (ಸೆ.18) ಟಾಲಿವುಡ್ ಚಲನಚಿತ್ರ ವಾಣಿಜ್ಯ ಮಂಡಳಿ ಲೈಂಗಿಕ ಕಿರುಕುಳ ಪರಿಹಾರ ಸಮಿತಿ ಪತ್ರಿಕಾಗೋಷ್ಠಿ ನಡೆಸಿ, ವಿವಾದ ಇತ್ಯರ್ಥವಾಗುವವರೆಗೆ ಆತನನ್ನು ಡ್ಯಾನ್ಸರ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವಂತೆ ಫೆಡರೇಶನ್‌ಗೆ ಎಚ್ಚರಿಸಿದೆ.
ಇನ್ನು ತಮ್ಮ ಸ್ಫೋಟಕ ಹೇಳಿಕೆಗಳಿಂದಲೇ ಹೆಸರುವಾಸಿಯಾಗಿರುವ ನಟಿ ಪೂನಂ ಕೌರ್, ಜಾನಿ ಮಾಸ್ಟರ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ಮಾಡಿರುವ ಆರೋಪಗಳನ್ನು ಗಮನಿಸಿದ ಫಿಲಂ ಚೇಂಬರ್ ಕಾರ್ಯದರ್ಶಿ ದಾಮೋದರ್ ಪ್ರಸಾದ್, ಮಹಿಳಾ ಸುರಕ್ಷತೆ ವಿಚಾರದಲ್ಲಿ ಟಾಲಿವುಡ್ ಇತರ ಚಿತ್ರರಂಗಗಳಿಗಿಂತ ಮುಂದಿದ್ದು, ಕೆಲಸದ ಸ್ಥಳದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳವಾದರೆ ಖಂಡಿತ ನಾವು ಹಿರಿಯರನ್ನು ಪ್ರಶ್ನಿಸುತ್ತೇವೆ. ಸಮಿತಿಗೆ ವರದಿ ನೀಡದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಪುನಮ್ ಕೌರ್ ಮಂಡಳಿಗೆ ಬಂದು ದೂರು ನೀಡಬೇಕು. ಯಾರೇ ಎಷ್ಟೇ ಪ್ರಭಾವ ಬೀರಿದರೂ ಸಮಿತಿಯ ತನಿಖೆಯನ್ನು ಕಾನೂನಾತ್ಮಕವಾಗಿಯೇ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಾನಿ ಮಾಸ್ಟರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಮಿತಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಈ ಪ್ರಕರಣದ ಸಮಿತಿಯ ವರದಿಯನ್ನು ಬಹಿರಂಗಪಡಿಸಬೇಕು. ಸರಕಾರದಿಂದ ಮಾರ್ಗಸೂಚಿ ಬಂದರೆ ಸಮಿತಿಗೆ ಹೆಚ್ಚಿನ ಬಲ ಬರಲಿದೆ ಎಂದು ಹೇಳಿದರು,(ಏಜೆನ್ಸೀಸ್).