

ಚೆನ್ನೈ: ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮ ಮುಂದಾಳತ್ವದಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಈಗಾಗಲೇ ದಿನಗಣನೆ ಆರಂಭಗೊಂಡಿದೆ. ಹೀಗಿರುವಾಗಲೇ ಟೆಸ್ಟ್ ತಂಡದಿಂದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ರನ್ನು ಕೈಬಿಡಲಾಗಿದೆ. ಸದ್ಯ ಈ ವಿಷಯ ಮಾಜಿ ಕ್ರಿಕೆಟಿಗರನ್ನು ಕೆರಳಿಸಿದ್ದು, ಕ್ಯಾಪ್ಟನ್ ರೋಹಿತ್ ಮತ್ತು ಗಂಭೀರ್ ವಿರುದ್ಧ ಕೋಪಗೊಳ್ಳುವಂತೆ ಮಾಡಿದೆ.
ಸದ್ಯ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಬಾಂಗ್ಲಾ ಆಟಗಾರರು ಬಹಳ ಸೊಕ್ಕಿನಿಂದ ಮೆರೆಯುತ್ತಿದ್ದು, ಟೀಮ್ ಇಂಡಿಯಾವನ್ನು ಸೋಲಿಗೆ ದೂಡುವುದು ಖಚಿತ ಎಂದು ಗರ್ವದಿಂದಲೇ ಪಂದ್ಯಕ್ಕಾಗಿ ಎದುರುನೋಡುತ್ತಿದ್ದಾರೆ. ಇತ್ತೀಚೆಗಷ್ಟೇ ಇದೇ ವಿಷಯವನ್ನು ಗಮನದಲ್ಲಿಟ್ಟುಕೊಂಡು ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾಗೆ ಟಕ್ಕರ್ ಕೊಟ್ಟ ರೋಹಿತ್, ಗೆಲುವಿನ ಮಂತ್ರ ನಮ್ಮಲ್ಲಿ ಸಿದ್ಧವಾಗಿದೆ. ಅಷ್ಟು ಸುಲಭ ಜಯ ಬಾಂಗ್ಲಾಗೆ ಸಿಗುವುದಿಲ್ಲ ಎಂಬ ಸಂದೇಶವನ್ನು ತಿರುಗೇಟಾಗಿ ನೀಡಿದ್ದರು. ಸದ್ಯ ತಂಡದಿಂದ ಕುಲದೀಪ್ ಯಾದವ್ರನ್ನು ಕೈಬಿಟ್ಟಿರುವುದು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅಸಮಾಧಾನಕ್ಕೆ ಕಾರಣವಾಗಿದೆ.
ಟೆಸ್ಟ್ ಪಂದ್ಯಕ್ಕೆಂದು ಮೂರು ವೇಗಿ ಮತ್ತು ಇಬ್ಬರು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿಕೊಂಡ ಟೀಮ್ ಮ್ಯಾನೇಜ್ಮೆಂಟ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಸದ್ಯ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಂಜ್ರೇಕರ್, "ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಿಂದ ಸ್ಟಾರ್ ಸ್ಪಿನ್ನರ್ ಆದ ಕುಲದೀಪ್ರನ್ನು ಇಷ್ಟು ಸುಲಭವಾಗಿ ತಂಡದಿಂದ ಕೈಬಿಟ್ಟಿರುವುದನ್ನು ನೋಡಿ ಭಾರೀ ಆಶ್ಚರ್ಯವಾಗುತ್ತಿದೆ" ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಈ ಹಿಂದಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕುಲದೀಪ್ ಯಾದವ್, ನಾಲ್ಕು ಪಂದ್ಯಗಳಲ್ಲಿ 20.15 ಸರಾಸರಿಯಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದರು. ಬೆನ್ ಸ್ಟೋಕ್ಸ್ ನೇತೃತ್ವದ ತಂಡದ ವಿರುದ್ಧ ಭಾರತ 4-1 ಅಂತರದಿಂದ ಗೆದ್ದು ಬೀಗಲು ಯಾದವ್ ಪ್ರಮುಖ ಕಾರಣರಾಗಿ ಹೊರಹೊಮ್ಮಿದ್ದರು. ಇಂತಹ ಅದ್ಭುತ ಪ್ರದರ್ಶನ ನೀಡಿದ್ದೇ ಆದರೂ ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅವರನ್ನು ತಂಡದಿಂದ ಕೈಬಿಟ್ಟಿರುವುದು ಕೆಲವರಿಗೆ ತೀರ ಬೇಸರ ತಂದಿದೆ,(ಏಜೆನ್ಸೀಸ್).