

ಲಖನೌ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಆದಿತ್ಯ ದೇವ್ ಪಾಠಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹತ್ಯೆಯಾದ ಯುವತಿಯನ್ನು ನಿಶಿತಾ (23) ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಪೂರ್ವ) ಸೈಯದ್ ಅಲಿ ಅಬ್ಬಾಸ್, ಯುವತಿ ನಿಶಿತಾ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಆದಿತ್ಯನನ್ನು ಭೇಟಿಯಾಗಲು ಆತನ ರೂಮ್ಗೆ ತೆರಳಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಿಚಾರ ಒಂದಕ್ಕೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿ ತನ್ನ ಬಳಿ ಇದ್ದ ಪಿಸ್ತೂಲ್ನಿಂದ ಯುವತಿಯ ಮೇಲೆ ಗುಂಡು ಹಾರಿಸಿದ್ದಾನೆ.
ಬಳಿಕ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಆರೋಪಿ ಪರಾರಿಯಾಗಿದ್ದಾನೆ. ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ಚಿನಹತ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿ ಇದ್ದ ನಾಡ ಪಿಸ್ತೂಲ್ಅನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ವಿರುದ್ಧ ಭಾರತ ದಂಡ ಸಂಹಿತೆ (IPC Section) 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಸೈಯದ್ ಅಲಿ ಅಬ್ಬಾಸ್ ತಿಳಿಸಿದ್ದಾರೆ.