

ಮಂಡ್ಯ: ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರ ನಿರ್ಲಕ್ಷಕ್ಕೆ ಚಲಿಸುತ್ತಿದ್ದ ರೈಲಿನಲ್ಲೇ ಮೂರ್ಛೆ ರೋಗಿಯೊಬ್ಬರು ನರಳಿ ನರಳಿ ಪ್ರಾಣ ಬಿಟ್ಟ ಘಟನೆ ಮಂಡ್ಯದ ಸಮೀಪದಲ್ಲಿ ನಡೆದಿದೆ.
ಮೃತರನ್ನು ಮೈಸೂರಿನ ರಮಾಬಾಯಿ ನಗರದ ನಿವಾಸಿ ಸ್ವಾಮಿ( 83) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೇಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸ್ವಾಮಿ ಮೈಸೂರಿನಲ್ಲಿ ರೈಲು ಹತ್ತುತ್ತಿದ್ದಂತೆ ಮೂರ್ಛೆ ಬಂದು ಕುಸಿದು ಬಿದ್ದಿದ್ದರು.
ಇದನ್ನೂ ಓದಿ: ಒಳಮೀಸಲಾತಿಗೆ ಕಾಂಗ್ರೆಸ್ ನಿರ್ಲಕ್ಷ್ಯ- ಗೋವಿಂದ ಕಾರಜೋಳ
ತಕ್ಷಣ ಸಹ ಪ್ರಯಾಣಿಕರು ಮೈಸೂರಿನಲ್ಲೇ ರೈಲ್ವೆ ಪೊಲೀಸರಿಗೆ, ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಮಾಹಿತಿ ಕೊಟ್ಟರೂ ಸಿಬ್ಬಂದಿಗಳು ಚಿಕಿತ್ಸೆ ಕೊಡಿಸದೇ ಇದ್ದರು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಸಿಬ್ಬಂದಿಗೆ ಮಾಹಿತಿ ನೀಡಿದರೂ ಅವರು ಮೈಸೂರಿನಲ್ಲಿ ಮೂರ್ಛೆ ರೋಗಿಯನ್ನು ಇಳಿಸಲು ಮುಂದಾಗಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಮೈಸೂರಿನಿಂದ ಮಂಡ್ಯವರೆಗೂ ಎಲ್ಲಿಯೂ ಚಿಕಿತ್ಸೆ ಸಿಗದ ಕಾರಣ ಮಂಡ್ಯ ಸಮೀಪ ಬರುತ್ತಿದ್ದಂತೆಯೆ ಅವರು ಸಾವಿಗೀಡಾಗಿದ್ದಾರೆ.
ರೈಲಿನ ಎಲ್ಲ ನಿಲ್ದಾಣದಲ್ಲಿಯು ರೈಲ್ವೆ ಪೊಲೀಸರಿಗೆ ತಿಳಿಸಿದ್ದರೂ ಚಿಕಿತ್ಸೆ ಕೊಡಿಸಲಿಲ್ಲ ಎಂದು ಪ್ರಯಾಣಿಕರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ರೈಲ್ವೆ ಅಧಿಕಾರಿಗಳು, ಪೊಲೀಸರ ನಿರ್ಲಕ್ಷ್ಯವೇ ಸ್ವಾಮಿ ಸಾವಿಗೆ ಕಾರಣ ಎಂದು ಸಹ ಪ್ರಯಾಣಿಕರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.
ಸದ್ಯ ಪೊಲೀಸರು ಮಂಡ್ಯದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.