

ಬೆಂಗಳೂರು: "ಪ್ರತಿನಿತ್ಯ ಬೈದರೆ ನರೇಂದ್ರ ಮೋದಿ ಅವರು ಏಕೆ ಸಿದ್ದು ಭೇಟಿ ಆಗ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಹೇಳಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿರುವ ಅವಮಾನ. ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ಬೈದಾಡಿದ್ದ ಬಿಎಸ್ವೈ ತನ್ನ ರಾಜಕೀಯ ಅಸ್ವಿತ್ವ ಉಳಿಸಿಕೊಳ್ಳಲು ಇಂತಹ ಗುಲಾಮಿ ಮನೋಭಾವ ಬೆಳೆಸಿಕೊಂಡಿರುವುದು ವಿಷಾದನೀಯ" ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
"ನರೇಂದ್ರ ಮೋದಿಯವರ ವಿರುದ್ಧ ವೈಯಕ್ತಿಕವಾಗಿ ನನಗೇನು ಪ್ರೀತಿ ಇಲ್ಲವೇ, ದ್ವೇಷ ಇಲ್ಲ. ವೈಯಕ್ತಿಕವಾಗಿ ಅವರೇನು ನನಗೆ ಹಾನಿ ಮಾಡಿಲ್ಲ. ಆದರೆ ಆರೂವರೆ ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿಯಾಗಿ ನಮ್ಮ ಜನರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಕಂಡು ಕಣ್ಣುಮುಚ್ಚಿಕೊಂಡು ಇರಲಾಗುವುದಿಲ್ಲ. ಈ ಪ್ರಶ್ನಿಸುವ ಕೆಲಸವನ್ನು ಮಾಡದಿದ್ದರೆ ಅದು ಜನದ್ರೋಹವಾಗುತ್ತದೆ" ಎಂದರು.
"ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದನ್ನು ಬಿಎಸ್ವೈ ಮರೆತು ಬಿಟ್ಟಂತಿದೆ. ಕೇಂದ್ರ ಸರ್ಕಾರ ಎಂದರೆ ಅರಸೊತ್ತಿಗೆಯೂ ಅಲ್ಲ, ಮೋದಿಯವರು ಅರಸರೂ ಅಲ್ಲ. ಅವರೂ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಅಷ್ಟೆ. ಒಕ್ಕೂಟ ವ್ಯವಸ್ಥೆಯಲ್ಲಿರುವ ಮುಖ್ಯಮಂತ್ರಿಗಳು ಪ್ರಧಾನಿಯ ಗುಲಾಮರಲ್ಲ. ಇಷ್ಟೊಂದು ದೀರ್ಘಕಾಲ ರಾಜಕೀಯದಲ್ಲಿರುವ ಯಡಿಯೂರಪ್ಪನವರಿಗೆ ಪ್ರಜಾಪ್ರಭುತ್ವದ ಈ ಮೂಲ ಪಾಠ ತಿಳಿಯದೆ ಇರುವುದು ದುರಂತವೇ ಸರಿ" ಎಂದು ಹೇಳಿದರು.
"ಬಹಳ ಮುಖ್ಯವಾಗಿ ಬಿ.ಎಸ್. ಯಡಿಯೂರಪ್ಪನವರಿಗೆ ಈ ರೀತಿ ಹೇಳಿಕೆ ನೀಡುವ ಯಾವ ನೈತಿಕತೆ ಇಲ್ಲವೇ ಇಲ್ಲ. ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿಕೊಂಡ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬೆಂಬಲಿಗರು ಕೇವಲ ಮೋದಿ ವಿರುದ್ಧ ಮಾತ್ರ ಅಲ್ಲ ಎಲ್.ಕೆ. ಅಡ್ವಾನಿಯವರಂತಹ ಅವರ ಪಕ್ಷದ ಹಿರಿಯ ನಾಯಕರ ವಿರುದ್ಧ ಹೇಗೆಲ್ಲ ಬೈದಿದ್ದಾರೆ ಎನ್ನುವುದನ್ನು ರಾಜ್ಯದ ಜನ ಕಂಡಿದ್ದಾರೆ" ಎಂದು ಹೇಳಿದರು.
"ಯಡಿಯೂರಪ್ಪನವರು ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಮೂರೂ ಹೊತ್ತು ಹಾಡಿ ಹೊಗಳುತ್ತಿದ್ದಾರೆ. ಹೀಗಿದ್ದರೂ ಈಗಲೂ ಅವರಿಗೆ ಕೂತು ನಿರಾಳವಾಗಿ ಮಾತನಾಡಲು ಮೋದಿಯವರು ಒಂದು ಅಪಾಯ್ಟ್‌ಮೆಂಟ್ ಕೊಡುತ್ತಿಲ್ಲ. ದೆಹಲಿಗೆ ತೆರಳಿ ದಿನಗಟ್ಟಲೆ ಕಾಯಬೇಕಾಗುತ್ತದೆ. ಕರ್ನಾಟಕದಲ್ಲಿ ರಾಜಾ ಹುಲಿ ಎಂದು ಕರೆಸಿಕೊಳ್ಳುವ ಬಿಎಸ್ವೈ ನರೇಂದ್ರ ಮೋದಿಯವರ ಮುಂದೆ ಇಲಿಯಂತೆ ವರ್ತಿಸುವುದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ" ಎಂದು ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುವ ಮುಖೇನ ತಿರುಗೇಟು ನೀಡಿದ್ದಾರೆ.