ಮದ್ವೆಯಾದ ಮೂರೇ ದಿನಕ್ಕೆ ನವದಂಪತಿಯ ಬರ್ಬರ ಹತ್ಯೆ: ಆರಂಭದಲ್ಲೇ ಅಂತ್ಯಕಂಡ ಹೊಸ ಜೀವನ

Tamil Nadu Couple
Published on

ಚೆನ್ನೈ: ಮದುವೆಯಾದ ಮೂರೇ ದಿನಕ್ಕೆ ನವದಂಪತಿ ಬರ್ಬರ ಹತ್ಯೆಯಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.

ಕೊಲೆಯಾದ ನವದಂಪತಿಯನ್ನು ಮಾರಿ ಸೆಲ್ವಂ (23) ಮತ್ತು ಕಾರ್ತಿಕಾ (21) ಎಂದು ಗುರುತಿಸಲಾಗಿದೆ. ಕಾರ್ತಿಕಾಳ ಪಾಲಕರ ವಿರೋಧದ ನಡುವೆಯೂ ಮದುವೆಯಾಗಿದ್ದೇ ಇಬ್ಬರ ಭೀಕರ ಕೊಲೆಗೆ ಕಾರಣ ಎಂದು ವರದಿಯಾಗಿದೆ.

ಗುರುವಾರ (ನ.02) ರಾತ್ರಿ ಕೊಲೆ ನಡೆದಿದ್ದು, ಒಂದು ಗುಂಪಿನ ಜನರು ನವದಂಪತಿ ವಾಸವಿದ್ದ ಮನೆಗೆ ನುಸುಳಿ, ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮೂರು ಬೈಕ್​ಗಳಲ್ಲಿ ಬಂದ ಆರು ಮಂದಿಯಿಂದ ಕೊಲೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತೂತುಕುಡಿ ಪೊಲೀಸ್​ ವರಿಷ್ಠಾಧಿಕಾರಿ ಡಾ. ಎಲ್​. ಬಾಲಾಜಿ ಸರವಣನ್​ ತಿಳಿಸಿದ್ದಾರೆ. ನವದಂಪತಿ ಒಂದೇ ಜಾತಿಗೆ ಸೇರಿದವರಾಗಿದ್ದು, ಯುವಕ ಮಾರಿ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಕಾರ್ತಿಕಾಳ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾರಿ ಮತ್ತು ಕಾರ್ತಿಕಾ ಅ.30ರಂದು ಕೋವಿಲ್​ಪಟ್ಟಿ ಠಾಣೆಗೆ ತೆರಳಿ ಪೊಲೀಸ್​ ರಕ್ಷಣೆ ಕೋರಿದ್ದರು. ಇದಾದ ಬಳಿಕ ಇಬ್ಬರು ಅದೇ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿದ್ದ ದೇವಸ್ಥಾನದಲ್ಲಿ ವಿವಾಹವಾದರು. ಮದುವೆಯಾದ ಮೂರೇ ದಿನಕ್ಕೆ ಇಬ್ಬರು ಬರ್ಬರ ಹತ್ಯೆಯಾಗಿದ್ದಾರೆ. ಈ ಕೊಲೆಯ ಹಿಂದೆ ಕಾರ್ತಿಕಾಳ ಅಂಕಲ್​ ಮತ್ತು ಸಂಬಂಧಿಕರು ಇರುವ ಶಂಕೆ ವ್ಯಕ್ತವಾಗಿದೆ.

ಮೃತ ಮಾರಿ ಶಿಪ್ಪಿಂಗ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು ಎಂದು ತೂತುಕುಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net