

ಬೆಂಗಳೂರು: ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶದ ಮನೆಗಳಿಗೆ ನಳ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಿಡುಗಡೆಗೊಳಿಸಿರುವ ಅನುದಾನವನ್ನು ಗಮನಿಸಿದರೆ ಉದ್ದೇಶಪೂರ್ವಕವಾಗಿ ಈ ಯೋಜನೆಯನ್ನು ಹಾಳುಗೆಡವಲು ಮುಂದಾಗಿರುವಂತಿದೆ. ಇದರ ವಿರುದ್ಧ ದನಿ ಎತ್ತಬೇಕಾಗಿದ್ದ ಕೇಂದ್ರ ಸಚಿವ ವಿ. ಸೋಮಣ್ಣ, ಈ ದ್ರೋಹವನ್ನು ಮುಚ್ಚಿಹಾಕಲು ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇಲ್ಲಿದೆ ನೋಡಿ ಸತ್ಯ: ಜೆಜೆಎಂ (ಜಲಜೀವನ್ ಮಿಷನ್)ಗೆ ಒಟ್ಟು ಹಂಚಿಕೆ - 49,262 ಕೋಟಿ ರೂ. (ಕೇಂದ್ರದ ಪಾಲು - 26,119 ಕೋಟಿ ರೂ., ರಾಜ್ಯದ ಪಾಲು - 23,142 ಕೋಟಿ ರೂ.). ಬಿಡುಗಡೆಯಾದ ಒಟ್ಟು ಅನುದಾನ - 32,202 ಕೋಟಿ ರೂ. (ಕೇಂದ್ರದ ಪಾಲು - 11,760 ಕೋಟಿ ರೂ., ರಾಜ್ಯದ ಪಾಲು - 20,442 ಕೋಟಿ ರೂ.)
ಕರ್ನಾಟಕದ ಒಟ್ಟು ಖರ್ಚು - 29,413 ಕೋಟಿ ರೂ.
"ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಪ್ರತಿಯೊಂದು ರೂಪಾಯಿಯನ್ನು ರಾಜ್ಯ ಸರ್ಕಾರವು ಉದ್ದೇಶಿತ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಂಪೂರ್ಣವಾಗಿ ಬಳಸಿಕೊಂಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಅನುದಾನದ ಪಾಲನ್ನು ನೀಡಲು ನಿರಾಕರಿಸುತ್ತಾ ಬಂದಿದೆ" ಎಂದರು.
"ನರೇಂದ್ರ ಮೋದಿ ಅವರ ಸರ್ಕಾರ ತನ್ನ ಬಜೆಟ್‌ನಲ್ಲಿ ಅಗತ್ಯ ಪ್ರಮಾಣದ ಅನುದಾನ ನೀಡದೆ ಜಲ ಜೀವನ್ ಮಿಷನ್ ಯೋಜನೆಯನ್ನು ಕೊಲ್ಲುತ್ತಿದೆ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಅನ್ಯಾಯವನ್ನು ಪ್ರಶ್ನಿಸಬೇಕಿದ್ದ ಸಚಿವ ಸೋಮಣ್ಣ ಅವರಂತಹ ಬಿಜೆಪಿ ನಾಯಕರು ನಿರ್ಲಜ್ಜರಾಗಿ ತಪ್ಪು ಮಾಹಿತಿಯನ್ನು ಹರಡಿ, ಕನ್ನಡಿಗರಿಗೆ ದ್ರೋಹ ಎಸಗುತ್ತಿದ್ದಾರೆ. ಈ ರೀತಿ ಜನರನ್ನು ದಾರಿ ತಪ್ಪಿಸುವ ಬದಲು, 2024-25 ಸಾಲಿನ ಬಜೆಟ್‌ನಲ್ಲಿ ಜೆಜೆಎಂಗೆ ಹಂಚಿಕೆಯಾಗಿದ್ದ ಪೂರ್ಣ ಅನುದಾನವನ್ನು ಯಾಕೆ ನೀಡಿಲ್ಲ ಎಂದು ಸಚಿವ ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಬಿಜೆಪಿಯ ಇಂತಹ ಕೃತ್ಯಗಳ ಹೊರತಾಗಿಯೂ ರಾಜ್ಯದಲ್ಲಿ ನಮ್ಮ ಸರ್ಕಾರವು ನುಡಿದಂತೆ ನಡೆದು ಉತ್ತಮ ಸಾಧನೆ ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆಯನ್ನು ಮುಂದುವರಿಸುತ್ತಿದ್ದರೂ, ಜಲ ಜೀವನ್ ಮಿಷನ್ ಯೋಜನೆಯ ಮುಖಾಂತರ ಪ್ರತಿ ಮನೆಗೆ ಸುರಕ್ಷಿತ ಕುಡಿಯುವ ನೀರನ್ನು ನೀಡಲು ಬದ್ಧವಾಗಿದ್ದೇವೆ" ಎಂದು ಹೇಳಿದರು.